ನಂದಿಗ್ರಾಮದಿಂದ ಸುವೇಂದು ಅಧಿಕಾರಿ ಉಮೇದುವಾರಿಕೆ ರದ್ದುಪಡಿಸುವಂತೆ ಟಿಎಂಸಿ ಆಗ್ರಹ

ಹೊಸದಿಲ್ಲಿ: ಎರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಸುವೇಂದು ಅಧಿಕಾರಿಯ ಹೆಸರು ಕಾಣಿಸಿಕೊಂಡಿರುವ ಕಾರಣ ನಂದಿಗ್ರಾಮ ಕ್ಷೇತ್ರದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಸುವೇಂದು ಅಧಿಕಾರಿಯ ಅಭ್ಯರ್ಥಿತನ ರದ್ದುಪಡಿಸುವಂತೆ ಟಿಎಂಸಿ ಬೇಡಿಕೆ ಇಟ್ಟಿದೆ.
ಟಿಎಂಸಿ ಅಧಿನಾಯಕಿ ಮಮತಾ ಅವರು ನಂದಿಗ್ರಾಮ ಕ್ಷೇತ್ರದಲ್ಲಿ ಸಲ್ಲಿಸಿರುವ ನಾಮಪತ್ರವನ್ನು ರದ್ದುಪಡಿಸಬೇಕೆಂದು ಒಂದು ಕಾಲದಲ್ಲಿ ಆಪ್ತರಾಗಿದ್ದ ಸುವೇಂದು ಅಧಿಕಾರಿ, ಬೇಡಿಕೆ ಸಲ್ಲಿಸಿರುವ ಕೆಲವೇ ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.
ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಚುನಾವಣಾ ನೋಂದಣಿ ಅಧಿಕಾರಿಗೆ ಪತ್ರ ಬರೆದಿರುವ ಟಿಎಂಸಿ ರಾಜ್ಯಸಭಾ ಸಂಸದ ಡರೆಕ್ ಒಬ್ರಿಯಾನ್, ನಂದಿಗ್ರಾಮ ಹಾಗೂ ಹಲ್ದಿಯಾ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಅಧಿಕಾರಿಯ ಹೆಸರು ಕಾಣಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 17 ಪ್ರಕಾರ ಇದಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದಾರೆ.
ಜನತಾ ಪ್ರಾತಿನಿಧ್ಯ ಕಾಯ್ದೆ 1951ರ ಸೆಕ್ಷನ್ 17ರ ಪ್ರಕಾರ, ಯಾವುದೇ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ನೋಂದಾವಣೆ ಮಾಡುವ ಹಕ್ಕಿಲ್ಲ.







