ಮನೆಯ ದೀಪ ಎಂದು ಮುತ್ತು ಕೊಡಲು ಸಾಧ್ಯವಿಲ್ಲ: ಸದನದಲ್ಲಿ ಸರಕಾರವನ್ನು ತರಾಟೆಗೆ ತೆಗೆದ ಬಿಜೆಪಿ ಶಾಸಕ

ಬೆಂಗಳೂರು, ಮಾ. 17: ‘ಮನೆ ದೀಪ ಎಂದು ಮುತ್ತು ಕೊಡಲು ಸಾಧ್ಯವಿಲ್ಲ. ಮನೆಯ ದೀಪ ಎಂದು ಮತ್ತು ಕೊಟ್ಟರೆ ತುಟಿ ಸುಡುತ್ತದೆ' ಎಂದು ಆಡಳಿತಾರೂಢ ಬಿಜೆಪಿಯ ಹುನಗುಂದ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ಇಂದಿಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಬುಧವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಆಡಳಿತ ಪಕ್ಷದ ಸದಸ್ಯ ಸಿದ್ದು ಸವದಿ ನೇಕಾರರ ಸಮಸ್ಯೆಯನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಈ ವೇಳೆ ಮಧ್ಯಪ್ರವೇಶಿಸಿದ ದೊಡ್ಡನಗೌಡ ಪಾಟೀಲ್, ‘ತಪ್ಪುಗಳನ್ನು ಯಾರೇ ಮಾಡಿದರೂ ಹೇಳಲೇಬೇಕು. ನಮ್ಮವರು ಎಂದು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ದೀಪ ನಮ್ಮ ಮನೆಯವರದ್ದಾದರೂ ಸುಡುತ್ತದೆ. ಪಕ್ಕದ ಮನೆಯವರದ್ದಾದರೂ ಸುಡುತ್ತದೆ. ಹೀಗಾಗಿ ನಮ್ಮ ಮನೆಯ ದೀಪ ಎಂದು ಮುತ್ತು ಕೊಡಲು ಸಾಧ್ಯವಿಲ್ಲ. ಸಿದ್ದು ಸವದಿ ಸರಕಾರದ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ತಪ್ಪುಗಳನ್ನು ಹೇಳುವ ಮೂಲಕ ತಿದ್ದಿಕೊಳ್ಳಲು ಸಲಹೆ-ಸೂಚನೆ ನೀಡುತ್ತಿದ್ದಾರೆ ಎಂದು ಸಮರ್ಥನೆ ಮಾಡಿದರು.
ಈ ವೇಳೆ ಸ್ಪೀಕರ್ ಪೀಠದಲ್ಲಿದ್ದ ಉಪಾಧ್ಯಕ್ಷ ಆನಂದ್ ಮಾಮನಿ, ‘ನೀವು ಆಡಳಿತ ಪಕ್ಷದವರು. ಬಜೆಟ್ ಪರವಾಗಿ ಮಾತನಾಡಬೇಕು ಎಂದು ಪ್ರತಿಕ್ರಿಯೆ ನೀಡಿದರು. ಇದಕ್ಕೆ ಉತ್ತರಿಸಿದ ಶಾಸಕ ದೊಡ್ಡನಗೌಡ ಪಾಟೀಲ್, ಮನೆ ದೀಪಕ್ಕೆ ಮುತ್ತು ಕೊಟ್ಟರೆ ತುಟಿ ಸುಡಲ್ವಾ? ಆಡಳಿತ ಪಕ್ಷ ಆದರೇನು, ವಿರೋಧ ಪಕ್ಷ ಆದರೇನು? ಸಮಸ್ಯೆಗಳ ಬಗ್ಗೆ ಗಮನ ಸೆಳೆಯಬೇಕು' ಎಂದರು.
ಇವರು ಬದಲಾವಣೆ ಆಗದೆ ಉದ್ಧಾರ ಆಗದು: ಈ ಹಂತದಲ್ಲಿ ಎದ್ದು ನಿಂತ ಆಡಳಿತ ಪಕ್ಷದ ಹಿರಿಯ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ‘ಸಂಕಷ್ಟದಲ್ಲಿರುವ ನೇಕಾರರು ಮತ್ತು ರೈತರ ಯೋಜನೆಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡುವುದಿಲ್ಲ. ಆದರೆ, ಸಿಆರ್‍ಎಫ್‍ನಲ್ಲಿ ಕೇಂದ್ರದಿಂದ 500 ಕೋಟಿ ರೂ.ಗಳಷ್ಟೇ ಅನುದಾನ ಬರುತ್ತದೆ. ಆದರೆ, 5,500 ಕೋಟಿ ರೂ.ಗಳಿಗೆ ಹಣಕಾಸು ಇಲಾಖೆ ಅಧಿಕಾರಿಗಳು ಒಪ್ಪಿಗೆ ನೀಡುತ್ತಾರೆ' ಎಂದು ಟೀಕಿಸಿದರು.
‘ಆರ್ಥಿಕ ಇಲಾಖೆ ಅಧಿಕಾರಿಗಳು ಬಡವರ ಯೋಜನೆ-ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಗದಂತೆ ನೋಡಿಕೊಳ್ಳುತ್ತಾರೆ. ರಾಜ್ಯದ ಅಭಿವೃದ್ಧಿಗೆ ಅವರು ಯಾವುದೇ ಸಂದರ್ಭದಲ್ಲಿಯೂ ಸ್ಪಂದಿಸುವುದಿಲ್ಲ. ರಾಜ್ಯದ ಹಣೆಬರಹವೇ ಇದೇ ಆಗಿದೆ. ಯಾರು ಮುಖ್ಯಮಂತ್ರಿಯಾದರೂ ಅಧಿಕಾರಿಗಳು ಇವರೇ ಇರುತ್ತಾರೆ. ಇವರು ಬದಲಾವಣೆ ಆಗದೆ ರಾಜ್ಯದ ಉದ್ಧಾರ ಸಾಧ್ಯವಿಲ್ಲ' ಎಂದು ಯತ್ನಾಳ್, ಆರ್ಥಿಕ ಇಲಾಖೆ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.







