ಚಾರ್ಮಾಡಿ ಘಾಟ್ ನಲ್ಲಿ ಸಾರಿಗೆ ಬಸ್, ಸರಕು ವಾಹನಗಳ ಸಂಚಾರಕ್ಕೆ ಅನುಮತಿ

ಚಿಕ್ಕಮಗಳೂರು, ಮಾ.17: ಭಾರೀ ಮಳೆಯಿಂದಾಗಿ ಜಿಲ್ಲೆಯ ಚಾರ್ಮಾಡಿ ಘಾಟ್ ವ್ಯಾಪ್ತಿಯ ಹೆದ್ದಾರಿಯಲ್ಲಿ ರಸ್ತೆ ಹಾಳಾಗಿದ್ದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಸಾರಿಗೆ ಬಸ್‍ಗಳೂ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಿ, ಸಾರಿಗೆ ಬಸ್ ಸೇರಿದಂತೆ ಭಾರೀ ವಾಹನಗಳ ಸಂಚಾರಕ್ಕೆ ಹೆದ್ದಾರಿಯನ್ನು ಮುಕ್ತಗೊಳಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷ ಮಳೆಗಾಲದಲ್ಲಿ ಅತೀವೃಷ್ಟಿಯಾಗಿದ್ದ ವೇಳೆ ಚಾರ್ಮಾಡಿ ಘಾಟ್ ವ್ಯಾಪ್ತಿಯ ಹೆದ್ದಾರಿಯ ಅಲ್ಲಲ್ಲಿ ಭಾರೀ ಭೂಕುಸಿತ ಉಂಟಾಗಿ ಹೆದ್ದಾರಿಗೆ ಭಾರೀ ಹಾನಿಯಾಗಿತ್ತು. ಹೆದ್ದಾರಿಯ ಅಲ್ಲಲ್ಲಿ ರಸ್ತೆಯೂ ಕುಸಿದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಲಘು ವಾಹನಗಳನ್ನು ಹೊರತು ಪಡಿಸಿ ಸಾರಿಗೆ ಬಸ್‍ಗಳು, ಸರಕು ಸಾಗಣೆ ವಾಹನಗಳ ಸಂಚಾರವನ್ನು ಜಿಲ್ಲಾಡಳಿತ ನಿಷೇಧ ಹೇರಿತ್ತು.
ಹೆದ್ದಾರಿಯ ವಿವಿಧೆಡೆ ಹಾನಿಯಾಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಾರಿಗೆ ಬಸ್‍ಗಳು ಹಾಗೂ ಭಾರೀ ವಾಹನಗಳ ಸಂಚಾರ ಸ್ತಬ್ಧಗೊಂಡಿತ್ತು. ಸದ್ಯ ಲೋಕೋಪಯೋಗಿ ಇಲಾಖೆಯ ವರದಿಯನ್ವಯ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಕೆಎಸ್ಸಾರ್ಟಿಸಿ ಕೆಂಪು ಬಸ್‍ಗಳು, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೊ ಟ್ರಾವೆಲರ್, ಅಂಬುಲೆನ್ಸ್, ಕಾರು, ಜೀಪು, ವ್ಯಾನ್, ಎಲ್.ಸಿ.ವಿ (ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಈ ಹೆದ್ದಾರಿಯಲ್ಲಿ ಬುಲೆಟ್ ಟ್ಯಾಂಕರ್ಸ್, ಶೀಫ್ಟ್ ಕಾರ್ಗೊ ಕಂಟೈನರ್ಸ್ ಹಾಗೂ ಲಾಂಗ್ ಚಾಸಿಸ್ ವಾಹನಗಳು, ಹೆವಿ ಕಮರ್ಷಿಯಲ್ ವೆಹಿಕಲ್ಸ್, ಮಲ್ಟಿ ಎಕ್ಸೆಲ್ ಟ್ರಕ್ ಟೈಲರ್, ಕೆಎಸ್ಸಾರ್ಟಿಸಿ ರಾಜ ಹಂಸ ಬಸ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳ ಸಂಚಾರಕ್ಕಿದ್ದ ನಿಷೇಧವನ್ನು ಮುಂದುವರಿಸಿದ್ದಾರೆ. ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದು, ಜಾಗರೂಕತೆಯಿಂದ ವಾಹನ ಸಂಚರಿಸುವುದು ಹಾಗೂ ನಿಗದಿತ ವೇಗದ ಮಿತಿಯಲ್ಲಿ ವಾಹನ ಚಲಾಯಿಸಬೇಕೆಂದು ಷರತ್ತು ವಿಧಿಸಿದ್ದಾರೆ.







