ಉಡುಪಿ: 10 ದಿನಗಳ ಸೇನಾ ನೇಮಕಾತಿ ರ್ಯಾಲಿಗೆ ಚಾಲನೆ; ಡಿಸಿಯಿಂದ ಧ್ವಜಾರೋಹಣ
ಮೊದಲ ದಿನ 3000 ಅಭ್ಯರ್ಥಿಗಳಿಗೆ ಪರೀಕ್ಷೆ

ಉಡುಪಿ, ಮಾ.17: ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ಸೇನಾ ನೇಮಕಾತಿ ರ್ಯಾಲಿಗೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕೋವಿಡ್‌ನಿಂದಾಗಿ ಒಂದು ವರ್ಷಗಳ ಕಾಲ ಮುಂದೂಡಲ್ಪಟ್ಟ ಈ ನೇಮಕಾತಿ ರ್ಯಾಲಿಯ ಮೊದಲ ದಿನವಾದ ಬುಧವಾರ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ 3 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದರು.
ದೈಹಿಕ ಪರೀಕ್ಷೆಗೆ ಮೊದಲು ಎಲ್ಲ ಅಭ್ಯರ್ಥಿಗಳ ಕೋವಿಡ್ ವರದಿಯನ್ನು ಪರಿಶೀಲಿಸಿ, ವರದಿಯ ಅವಧಿ ಮುಗಿದ ಸುಮಾರು 150 ಮಂದಿಗೆ ರ್ಯಾಪಿಡ್ ಕೋವಿಡ್ ಟೆಸ್ಟ್ ಮಾಡಲಾಯಿತು. 1600 ಮೀಟರ್ ಓಟ, ಜಿಗ್‌ಜಾಗ್, ಪುಲ್ಅಪ್ಸ್, ಉದ್ದ ಜಿಗಿತ ಹಾಗೂ ದೈಹಿಕ ಆಳತೆ ಪರೀಕ್ಷೆಗಳನ್ನು ನಡೆಸಿ, ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರ ಮೂಲಕ ಶಿಕ್ಷಣ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಯಿತು. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿ ಗಳಿಗೆ ಗುರುವಾರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಇಂದಿನಿಂದ ಮಾ.29ರವರೆಗೆ ಒಟ್ಟು 10 ದಿನಗಳ ಕಾಲ ನಡೆಯಲಿರುವ ಈ ರ್ಯಾಲಿಯಲ್ಲಿ ಸುಮಾರು 38 ಸಾವಿರ ಮಂದಿ ಅಭ್ಯರ್ಥಿಗಳು ಭಾಗವಹಿಸಲಿ ದ್ದಾರೆ. ಅಭ್ಯರ್ಥಿಗಳಿಗೆ ಉಡುಪಿ ಸಹೃದಯ ಬಂಧುಗಳು ಉಚಿತ ಉಪಹಾರ ವ್ಯವಸ್ಥೆಯನ್ನು ಹಾಗೂ ಉಡುಪಿ ಶ್ರೀಕೃಷ್ಣ ಮಠದಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸೇನಾ ನೇಮಾಕಾತಿ ಮಂಗಳೂರು ವಿಭಾಗದ ಮುಖ್ಯಸ್ಥ ಕರ್ನಲ್ ದುಭಾಶ್, ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ರಾಜ್ಯದ 38ಸಾವಿರ ಮಂದಿ ಅಭ್ಯರ್ಥಿಗಳು ಈ ಸೇನಾ ನೇಮಕಾತಿ ರ್ಯಾಲಿ ಯಲ್ಲಿ ಭಾಗವಹಿಸುತ್ತಿದ್ದಾರೆ. ಸೇನೆಯ ಅಧಿಕಾರಿ ಗಳು ಉಡುಪಿ ಜಿಲ್ಲಾಡಳಿತದ ನೆರವನ್ನು ಶ್ಲಾಘಿಸಿದ್ದಾರೆ. ಉಡುಪಿ ನಗರಸಭೆಯ ವತಿಯಿಂದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಯುವಕರಿಗೆ ಉದ್ಯೋಗದ ಭರವಸೆ ದೊರೆಯುವ ನಿಟ್ಟಿನಲ್ಲಿ ಕೊರೋನಾ ಬಳಿಕ ಈ ರ್ಯಾಲಿ ನಡೆಸಲಾಗುತ್ತಿದೆ. ವಿದ್ಯುತ್ ನೌಕರರ ಸಂಘದಿಂದ ಉಚಿತ ಉಪಹಾರದ ವ್ಯವಸ್ಥೆ ಮಾಡಿದ್ದಾರೆ.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ
ಸೈನ್ಯಕ್ಕೆ ಸೇರಬೇಕೆಂಬುದು ಮೊದಲೇ ನನ್ನ ಕನಸು ಇತ್ತು. ನಿವೃತ್ತ ಸೈನಿಕ ನವಾಝ್ ಎಂಬವರು ನಮಗೆ ಒಂದೂವರೆ ತಿಂಗಳ ಕಾಲ ಶೃಂಗೇರಿಯಲ್ಲಿ ಉಚಿತವಾಗಿ ತರಬೇತಿ ನೀಡಿದ್ದಾರೆ. ಇದರಿಂದಾಗಿ ನಮಗೆ ಸೈನ್ಯಕ್ಕೆ ಆಯ್ಕೆಯಾಗುವ ಆತ್ಮವಿಶ್ವಾಸ ಹೆಚ್ಚಾಗಿದೆ.
-ಪ್ರಜ್ವಿತ್, ಎನ್.ಆರ್.ಪುರ, ಶೃಂಗೇರಿ









