ಉಡುಪಿ: 42 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢ
ಉಡುಪಿ, ಮಾ.17: ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬರುತ್ತಿರುವವರ ಸಂಖ್ಯೆಯಲ್ಲಿ ಇತ್ತೀಚೆಗೆ ಹೆಚ್ಚಳ ಕಂಡುಬಂದಿದೆ. ಬುಧವಾರ ಈ ಸಂಖ್ಯೆ 42ಕ್ಕೇರಿದೆ. ದಿನದಲ್ಲಿ 13 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆ ಈಗ 114ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ದೈನಂದಿನ ಬುಲೆಟಿನ್ ತಿಳಿಸಿದೆ.
ಜಿಲ್ಲೆಯಲ್ಲಿ ಮಾ.14ರಂದು 12 ಮಂದಿ, 15ರಂದು 24 ಹಾಗೂ 16ರಂದು 32 ಮಂದಿ ಕೊರೋನಕ್ಕೆ ಪಾಸಿಟಿವ್ ಬಂದಿದ್ದರು. ಇಂದು ಪಾಸಿಟಿವ್ ಬಂದವರಲ್ಲಿ 24 ಮಂದಿ ಪುರುಷರು ಹಾಗೂ 18 ಮಂದಿ ಮಹಿಳೆಯರು. ಇವರಲ್ಲಿ 35 ಮಂದಿ ಉಡುಪಿ ತಾಲೂಕಿನವರಾದರೆ ಐವರು ಕುಂದಾಪುರ ಹಾಗೂ ಒಬ್ಬರು ಕಾರ್ಕಳ ತಾಲೂಕಿನವರು. ಉಳಿದ ಒಬ್ಬರು ಹೊರಜಿಲ್ಲೆಯವರು. ಮಂಗಳವಾರ 13 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 23,624ಕ್ಕೇರಿದೆ.
ಮಂಗಳವಾರ ಜಿಲ್ಲೆಯ 1219 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಲ್ಲಿ 1174 ಮಂದಿಯ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿದೆ. ಉಳಿದ 42 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಒಟ್ಟು ಸಂಖ್ಯೆ ಈಗ 23,928 ಆಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 3,88,365 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.







