ಮಾದಕ ವಸ್ತು ಮಾರಾಟ ಆರೋಪ: ವಿದೇಶಿ ಪ್ರಜೆಗಳ ಬಂಧನ

ಬೆಂಗಳೂರು, ಮಾ.17: ಮಾದಕ ವಸ್ತುಗಳ ಮಾರಾಟ ಆರೋಪ ಪ್ರಕರಣ ಸಂಬಂಧ ವಿದೇಶಿ ಪ್ರಜೆಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ದುಬಾರಿ ಬೆಲೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನೈಜೀರಿಯಾ ದೇಶದ ಅಬಾಕಹಿಕಿ ರಾಜ್ಯದ ಯುಜೋಚಿಕ್‍ವು ಮಾರ್ಕ್ ಮಾರಿಸ್ ಬಟೇಗೆವು(38), ಎನುಗೋ ರಾಜ್ಯದ ಜೋಸೆಫ್‍ದುಕಮೇ ಒಕಾವೋ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಎಂಡಿಎಂಎ, ಎಲ್‍ಎಸ್‍ಡಿ ಪೇಪರ್ ಹಾಗೂ ಎಕ್ಸ್‍ಟೆನ್ಸಿ ಸೇರಿದಂತೆ ಒಟ್ಟು 65 ಲಕ್ಷರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಯುಜೋಚಿಕ್‍ವು ಎಂಬಾತನಿಂದ 5 ಸಾವಿರ ನಗದು ಸೇರಿ 50 ಲಕ್ಷ ಬೆಲೆ ಮೌಲ್ಯದ 500 ಗ್ರಾಂ ಎಂಡಿಎಂಎ 91 ಎಕ್ಸ್‍ಟೆನ್ಸಿ ಮಾತ್ರೆಗಳು, 56 ಎಲ್‍ಎಸ್‍ಡಿ ಮಾತ್ರೆಗಳು, 3 ಮೊಬೈಲ್‍ಗಳು, ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಬ್ಬ ಆರೋಪಿ ಜೋಸೆಫ್‍ದುಕಮೇ ಒಕಾವೋನಿಂದ 15 ಲಕ್ಷ ಮೌಲ್ಯದ 65 ಗ್ರಾಂ ಕೋಕೇನ್, 50 ಎಕ್ಸ್‍ಟೆನ್ಸಿ ಮಾತ್ರೆಗಳು, 56 ಎಲ್‍ಎಸ್‍ಡಿ ಪೇಪರ್ ಗಳು, 10 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 2 ಮೊಬೈಲ್‍ಗಳು, ಒಂದು ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ವಾಣಿಜ್ಯ ಚಟುವಟಿಕೆಗಳ ವೀಸಾದಡಿ ಭಾರತಕ್ಕೆ ಬಂದು ಬೆಂಗಳೂರು ನಗರದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡು ಕಾನೂನು ಬಾಹಿರವಾಗಿ ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದರು.







