ಟಿಎಂಸಿ ಪ್ರಣಾಳಿಕೆ ಬಿಡುಗಡೆ: ವರ್ಷಕ್ಕೆ 5 ಲಕ್ಷ ಉದ್ಯೋಗ, ಮನೆಬಾಗಿಲಿಗೆ ಪಡಿತರ ವಿತರಣೆ ಭರವಸೆ

ಕೋಲ್ಕತಾ: ಮುಂಬರುವ ಪಶ್ಚಿಮಬಂಗಾಳ ಚುನಾವಣೆಗೆ ತೃಣಮೂಲ ಕಾಂಗ್ರೆಸ್(ಟಿಎಂಸಿ)ಅಧ್ಯಕ್ಷೆ ಮಮತಾ ಬ್ಯಾನರ್ಜಿ ಬುಧವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ತನ್ನ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ತಾನು ತರಲಿರುವ ಯೋಜನೆಗಳು ಹಾಗೂ ಕ್ರಮಗಳ ಬಗ್ಗೆ ಭರವಸೆ ನೀಡಿದ್ದಾರೆ.
ತನ್ನ ಸರಕಾರವು ನಿರುದ್ಯೊಗವನ್ನು ಕಡಿಮೆ ಮಾಡಿ ಪ್ರತಿ ವರ್ಷ 5 ಲಕ್ಷ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ ಎಂದು ಭರವಸೆ ನೀಡಿದರು.
“ನಾವು ಅಧಿಕಾರಕ್ಕೆ ಬಂದ ಬಳಿಕ ನಮ್ಮ ಭರವಸೆಯನ್ನು ಶೇ.100ರಷ್ಟು ಈಡೇರಿಸಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ನಾವು ಮಾಡಿದ ಕೆಲಸಕ್ಕೆ ವಿಶ್ವವೇ ಶ್ಲಾಘಿಸುತ್ತಿದೆ. ನಾವು ವಿಶ್ವ ಸಂಸ್ಥೆಯಿಂದ ಪ್ರಶಸ್ತಿ ಪಡೆದಿದ್ದೇವೆ. 100 ದಿನಗಳ ಕೆಲಸ ಕೊಡುವುದರಲ್ಲಿ ನಾವೇ ನಂ.1. ನಾವು ಶೇ.40ರಷ್ಟು ಬಡತನ ಕಡಿಮೆ ಮಾಡಿದ್ದೇವೆ. ನಾವು ಮೂರು ಬಾರಿ ರೈತರ ಆದಾಯವನ್ನು ಹೆಚ್ಚಿಸಿದ್ದೇವೆ''ಎಂದು ಪತ್ರಿಕಾಗೋಷ್ಠಿಯಲ್ಲಿ ಮಮತಾ ಹೇಳಿದರು.
ಸಮಾಜದ ಆರ್ಥಿಕವಾಗಿ ಹಿಂದುಳಿದವರನ್ನು ಆಕರ್ಷಿಸುವ ಪ್ರಯತ್ನವಾಗಿ ಮಮತಾ ಬ್ಯಾನರ್ಜಿ ಅವರು ತನ್ನ ಸರಕಾರವು ಉಚಿತವಾಗಿ ಮನೆ-ಮನೆಗೆ ಪಡಿತರ ವಿತರಿಸುವುದಾಗಿ ಆಶ್ವಾಸನೆ ನೀಡಿದರು.
ಬಡವರಿಗೆ ವಾರ್ಷಿಕವಾಗಿ ಆರ್ಥಿಕ ಸಹಾಯದ ಖಾತರಿಯನ್ನೂ ಘೋಷಿಸಿದರು. ಈ ಯೋಜನೆಯಡಿ ಸಾಮಾನ್ಯ ಜಾತಿ ಫಲಾನುಭವಿಗಳಿಗೆ ವಾರ್ಷಿಕ 6,000 ರೂ. ಹಾಗೂ ಹಿಂದುಳಿದ ಸಮುದಾಯಕ್ಕೆ ಈ ಮೊತ್ತ 12,000 ರೂ. ಆಗಿರುತ್ತದೆ.
ತಾನು ಈಗ ರೈತರಿಗೆ ನೀಡುತ್ತಿರುವ ವಾರ್ಷಿಕ ಆರ್ಥಿಕ ಸಹಾಯವನ್ನು ಹೆಚ್ಚಿಸುವುದಾಗಿ ಟಿಎಂಸಿ ತನ್ನ ಪ್ರಣಾಲಿಕೆಯನ್ನು ಭರವಸೆ ನೀಡಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪ್ರತಿ ವರ್ಷ, ಪ್ರತಿ ಎಕರೆಗೆ ಈಗ ನೀಡುತ್ತಿರುವ 6,000 ರೂ.ನಿಂದ 10,000 ರೂ. ನೀಡುವುದಾಗಿ ಮಮತಾ ಘೋಷಿಸಿದರು. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ತನ್ನ ಸರಕಾರವು 10 ಲಕ್ಷ ರೂ.ಮಿತಿಯ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಆಶ್ವಾಸನೆ ನೀಡಿದರು. ಈ ಮೊತ್ತಕ್ಕೆ ಶೇ.4ರಷ್ಟು ಬಡ್ಡಿ ವಿಧಿಸಲಾಗುತ್ತದೆ ಎಂದರು.







