ಸಿಡಿ ಪ್ರಕರಣ: ನಿಷ್ಪಕ್ಷ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಆಪ್ ಧರಣಿ

ಬೆಂಗಳೂರು, ಮಾ.17: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ನಿಷ್ಪಕ್ಷ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿ ಆಮ್‍ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಬಿಜೆಪಿ ಸರಕಾರದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ಇಲ್ಲ. ರಾಜ್ಯದ ಪ್ರಭಾವಿ ವ್ಯಕ್ತಿಯಿಂದ ಮಹಿಳೆಗೆ ಆಗಿರುವ ಅನ್ಯಾಯದ ವಿರುದ್ಧ ಕೇಂದ್ರ ಮಹಿಳಾ ಆಯೋಗ ಯಾವ ಕ್ರಮವನ್ನು ಕೈಗೊಂಡಿಲ್ಲ. ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಅಧ್ಯಕ್ಷ ಮೋಹನ್‍ದಾಸರಿ, ಈ ಘಟನೆಯಾಧರಿಸಿ ರಮೇಶ್ ಜಾರಕಿಹೊಳಿ ಅನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯ ಮಾಡಿದರು.
ಈ ಪ್ರಕರಣದಲ್ಲಿ ಎಫ್‍ಐಆರ್ ದಾಖಲಿಸದೆ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿವೆ. ಸಿಟ್ ತನಿಖಾ ತಂಡದ ಮೂಲಕ ರಾಜ್ಯ ಸರಕಾರ ಪ್ರಕರಣವನ್ನು ತಮಗಿಷ್ಟ ಬಂದ ಹಾಗೆ ತನಿಖೆ ಮಾಡುತ್ತಿದೆ. ಜಾರಕಿಹೊಳಿ ಪರವಾಗಿ ಸಂದರ್ಭಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಈ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಕುಶಲಾ ಸ್ವಾಮಿ, ಮುಖಂಡರಾದ ಜಗದೀಶ್ ಸದಂ, ಬಿ.ಟಿ.ನಾಗಣ್ಣ, ರಾಜಶೇಖರ್ ದೊಡ್ಡಣ್ಣ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







