ಚೀನಾದೊಂದಿಗೆ ಭಾರತದ ಸಂಬಂಧ ಸಂಕೀರ್ಣವಾಗಿದೆ: ಮುರಳೀಧರನ್

ಫೈಲ್ ಚಿತ್ರ
ಹೊಸದಿಲ್ಲಿ,ಮಾ.17: ಚೀನಾದೊಂದಿಗೆ ಭಾರತದ ಸಂಬಂಧವು ಸಂಕೀರ್ಣವಾಗಿದೆ ಮತ್ತು ಪರಸ್ಪರರ ಸಂವೇದನೆಗಳು,ಕಾಳಜಿಗಳು ಮತ್ತು ಆಕಾಂಕ್ಷೆಗಳನ್ನು ಗೌರವಿಸಿ ಸಂಬಂಧಗಳ ಭವಿಷ್ಯದ ದಿಕ್ಕನ್ನು ರೂಪಿಸಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಸಹಾಯಕ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರಳೀಧರನ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ಚೀನಾದಿಂದ ಈ ಹಿಂದೆ ಒಪ್ಪಂದಗಳ ಉಲ್ಲಂಘನೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆ (ಎಲ್ಎಸಿ)ಯನ್ನು ದಾಟಲು ಪದೇ ಪದೇ ವಿಫಲ ಪ್ರಯತ್ನಗಳಿಂದಾಗಿ ಭಾರತ-ಚೀನಾ ಸಂಬಂಧಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗಿವೆಯೇ ಎಂಬ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಮುರಳೀಧರನ್,ಭಾರತವು ಎಲ್ಲ ಸಂಘರ್ಷ ತಾಣಗಳಿಂದ ನಿಸ್ಸೇನೀಕರಣದ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಪೂರ್ವ ಲಡಾಖ್ನ ಎಲ್ಎಸಿಯಲ್ಲಿಯ ಬಾಕಿ ಸಮಸ್ಯೆಗಳನ್ನು ಬಗೆಹರಿಸಲು ಚೀನಾದೊಂದಿಗೆ ಚರ್ಚೆಗಳನ್ನು ಮುಂದುವರಿಸಲಿದೆ ಎಂದೂ ಹೇಳಿದರು.
ಪೂರ್ವ ಲಡಾಖ್ ವಿವಾದವನ್ನು ಪ್ರಸ್ತಾಪಿಸಿದ ಅವರು,ಚೀನಿ ಸೇನೆಯು ಕಳೆದ ವರ್ಷದ ಎಪ್ರಿಲ್/ಮೇ ತಿಂಗಳಿನಿಂದ ಎಲ್ಎಸಿಯಲ್ಲಿ ಯಥಾಸ್ಥಿತಿಯನ್ನು ಬದಲಿಸಲು ಹಲವಾರು ಪ್ರಯತ್ನಗಳನ್ನು ನಡೆಸಿತ್ತು ಮತ್ತು ಅದಕ್ಕೆ ಭಾರತದ ಸಶಸ್ತ್ರ ಪಡೆಗಳು ಸೂಕ್ತವಾಗಿ ಉತ್ತರಿಸಿದ್ದವು. ಇಂತಹ ಏಕಪಕ್ಷೀಯ ಪ್ರಯತ್ನಗಳನ್ನು ಸಹಿಸುವುದಿಲ್ಲ ಎಂದು ಚೀನಾಕ್ಕೆ ಸ್ಪಷ್ಟಪಡಿಸಲಾಗಿದೆ. ಚೀನಾದ ಈ ಕೃತ್ಯಗಳು ಪೂರ್ವ ಲಡಾಖ್ನ ಎಲ್ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕದಡಿವೆ ಎಂದರು.





