ಸಶಸ್ತ್ರ ಪಡೆಗಳಿಗೆ ಅಗತ್ಯ ಬಟ್ಟೆಗಳು ಭಾರತದಲ್ಲಿಯೇ ತಯಾರಾದರೆ ಅವುಗಳ ಆಮದಿಗೆ ನಿಷೇಧ: ಜ.ಬಿಪಿನ್ ರಾವತ್

ಹೊಸದಿಲ್ಲಿ,ಮಾ.17: ದೇಶಾದ್ಯಂತ ತಮ್ಮ ಯೋಧರಿಗೆ ಪ್ರತಿಕೂಲ ಹವಾಮಾನವನ್ನು ಸಹಿಸಿಕೊಳ್ಳಲು ಅಗತ್ಯ ಬಟ್ಟೆಗಳನ್ನು ತಯಾರಿಸಲು ಭಾರತೀಯ ಜವುಳಿ ಉದ್ಯಮಕ್ಕೆ ಸಾಧ್ಯವಾದರೆ ಅವುಗಳ ಆಮದನ್ನು ಸಶಸ್ತ್ರ ಪಡೆಗಳು ಸಂಪೂರ್ಣವಾಗಿ ನಿಷೇಧಿಸಲಿವೆ ಎಂದು ಸೇನಾ ಸಿಬ್ಬಂದಿಗಳ ಮುಖ್ಯಸ್ಥ (ಸಿಡಿಎಸ್) ಜ.ಬಿಪಿನ್ ರಾವತ್ ಅವರು ಬುಧವಾರ ಇಲ್ಲಿ ಹೇಳಿದರು.
ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾವತ್,‘ಲಡಾಖ್‌ನ ಉತ್ತರ ಗಡಿಗಳ ಸಮೀಪದ ಅತ್ಯಂತ ಚಳಿಯ ವಾತಾವರಣ,ಮರುಭೂಮಿಗಳು ಹಾಗೂ ಅರಣ್ಯ ಮತ್ತು ಅರೆ ಪರ್ವತ ಪ್ರದೇಶಗಳನ್ನೊಳಗೊಂಡ ಈಶಾನ್ಯದಲ್ಲಿನ ಉರಿಬಿಸಿಲಿನ,ಶುಷ್ಕ ಮತ್ತು ಆರ್ದ್ರತೆಯ ವಾತಾವರಣಗಳಲ್ಲಿ ನಮ್ಮ ಯೋಧರಿಗೆ ರಕ್ಷಣೆಯನ್ನು ನೀಡಬಲ್ಲ ಉಡುಪುಗಳು ನಮಗೆ ಅಗತ್ಯವಾಗಿವೆ. ಸದ್ಯಕ್ಕೆ ನಮ್ಮ ಅಗತ್ಯದ ಬಹುಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಎತ್ತರದ ಪ್ರದೇಶಗಳಲ್ಲಿ ಧರಿಸುವ ಉಡುಪುಗಳಿಗೆ ಸಂಬಂಧಿಸಿದಂತೆ ಕಳೆದ ಒಂದೆರಡು ವರ್ಷಗಳಿಂದ ಭಾರತೀಯ ಜವುಳಿ ಉದ್ಯಮ ರಂಗದಲ್ಲಿ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಇಂತಹ ಬಟ್ಟೆಗಳಿಗಾಗಿ ನಾವೀಗ ಬೇಡಿಕೆಗಳನ್ನು ಸಲ್ಲಿಸುತ್ತಿದ್ದೇವೆ. ಇವು ನಮ್ಮ ನಿರೀಕ್ಷೆಗೆ ತಕ್ಕಂತಿದ್ದರೆ ಸಶಸ್ತ್ರ ಪಡೆಗಳಲ್ಲಿ ನಾವು ಬಳಸುತ್ತಿರುವ ಸಮಗ್ರ ಬಟ್ಟೆಗಳನ್ನು ಅಥವಾ ‘ಟೆಕ್ನೋ ಕ್ಲಾಥಿಂಗ್ ’ಅನ್ನು ಸ್ವದೇಶಿ ಉತ್ಪನ್ನಗಳ ಪಟ್ಟಿಯಲ್ಲಿ ಸೇರಿಸಲು ನಾವು ಹಿಂದೇಟು ಹಾಕುವುದಿಲ್ಲ. ಇದರರ್ಥ ನಾವು ಈ ಬಟ್ಟೆಗಳ ಆಮದನ್ನು ಸಂಪೂರ್ಣವಾಗಿ ನಿಷೇಧಿಸುತ್ತೇವೆ ಮತ್ತು ಆತ್ಮನಿರ್ಭರ ಭಾರತದಡಿ ಉದ್ಯಮಕ್ಕೆ ನಾವು ನೀಡಲು ಬಯಸಿರುವ ಬೆಂಬಲದ ಭಾಗವಾಗಿ ರಕ್ಷಣಾ ಪಡೆಗಳು ಭಾರತೀಯ ಕೈಗಾರಿಕೆಯನ್ನೇ ಅವಲಂಬಿಸುವಂತೆ ನೋಡಿಕೊಳ್ಳುತ್ತೇವೆ ’ ಎಂದು ತಿಳಿಸಿದರು.





