ಎರಡು ವರ್ಷಗಳಲ್ಲಿ ಕೇವಲ ಶೇ.28 ಎಸ್ಸಿ ವಿದ್ಯಾರ್ಥಿಗಳಿಗೆ ಲಾಭ: ಸಂಸದೀಯ ಸಮಿತಿ
ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮಾ.17: ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗಾಗಿರುವ ಸರಕಾರದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಯೋಜನೆಯಿಂದ ಕಳೆದೆರಡು ವರ್ಷಗಳಲ್ಲಿ ನಿರೀಕ್ಷಿತ ನಾಲ್ಕು ಕೋಟಿಯ ಪೈಕಿ ಕೇವಲ ಶೇ.28ರಷ್ಟು ವಿದ್ಯಾರ್ಥಿಗಳಿಗೆ ಲಾಭವಾಗಿದೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕುರಿತು ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಮಂಡಿಸಿರುವ ವರದಿಯು ಬೆಟ್ಟು ಮಾಡಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಮುಖ್ಯ ಕಾರ್ಯಕ್ರಮಗಳಲ್ಲೊಂದಾಗಿರುವ ಈ ಯೋಜನೆಯು 1944ರಿಂದಲೂ ಅಸ್ತಿತ್ವದಲ್ಲಿದ್ದು, ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳು ಯಾವುದೇ ಉನ್ನತ ಶಿಕ್ಷಣವನ್ನು ಪಡೆಯುವುದನ್ನು ಸಾಧ್ಯವಾಗಿಸಲು ಅವರಿಗೆ ಆರ್ಥಿಕ ನೆರವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.
ಸದ್ಯ ಈ ಯೋಜನೆಯು ಹೆತ್ತವರ ವಾರ್ಷಿಕ ಆದಾಯ 2.5 ಲ.ರೂ.ಗಳನ್ನು ಮೀರದ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣದ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಹಣಕಾಸು ನೆರವಿನ ಖಾತರಿಯನ್ನು ನೀಡುತ್ತಿದೆ.
2018-19 ಮತ್ತು 2019-20 (ಡಿ.31ರವರೆಗೆ)ನೇ ಸಾಲುಗಳಲ್ಲಿ ಕೇವಲ 113.15 ಲಕ್ಷ ವಿದ್ಯಾರ್ಥಿಗಳು ಯೋಜನೆಯ ಲಾಭಗಳನ್ನು ಪಡೆದುಕೊಂಡಿದ್ದು,ಇದಕ್ಕಾಗಿ 8639.47 ಕೋ.ರೂ.ಗಳು ವೆಚ್ಚವಾಗಿವೆ. ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಕೋಟಿ ವಿದ್ಯಾರ್ಥಿಗಳ ಗುರಿಯನ್ನು ಸಾಧಿಸಲು ಫಲಾನುಭವಿಗಳ ಸಂಖ್ಯೆ ಇನ್ನೂ ಹೆಚ್ಚಬೇಕು,ಅಂದರೆ ವಾರ್ಷಿಕ ಸುಮಾರು 80 ಲಕ್ಷಗಳಷ್ಟಾದರೂ ಇರಬೇಕು ಎಂದು ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳು ಯೋಜನೆಯ ವೆಚ್ಚವನ್ನು 60:40 ಅನುಪಾತದಲ್ಲಿ ಭರಿಸುತ್ತಿವೆ,ಆದರೆ ರಾಜ್ಯಗಳು ತಮ್ಮ ಪಾಲನ್ನು ಸರಿಯಾಗಿ ಪಾವತಿಸುತ್ತಿಲ್ಲ ಮತ್ತು ಇದು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿದ್ಯಾರ್ಥಿ ವೇತನಗಳು ಸಿಗದಿರುವುದಕ್ಕೆ ಕಾರಣವಾಗಿದೆ. ನಿಯಮದಂತೆ ರಾಜ್ಯಗಳು ತಮ್ಮ ಪಾಲನ್ನು ಭರಿಸಿದ ಬಳಿಕವಷ್ಟೇ ಕೇಂದ್ರವು ತನ್ನ ಪಾಲನ್ನು ನೀಡುತ್ತದೆ. ಹೀಗಾಗಿ ತಮ್ಮ ಪಾಲು ಒದಗಿಸುವಲ್ಲಿ ರಾಜ್ಯಗಳ ವಿಳಂಬಗಳಿಂದ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲು ಸೂಕ್ತ ವ್ಯವಸ್ಥೆಯೊಂದನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಸಮಿತಿಯು,ವಿದ್ಯಾರ್ಥಿಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತಾಗಲು ಮತ್ತು ಐದು ವರ್ಷಗಳಲ್ಲಿ ನಾಲ್ಕು ಕೋಟಿ ಫಲಾನುಭವಿಗಳ ಗುರಿಯನ್ನು ಸಾಧಿಸುವಂತಾಗಲು ಯೋಜನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಅರಿವನ್ನು ಮೂಡಿಸಬೇಕು ಎಂದು ಶಿಫಾರಸು ಮಾಡಿದೆ.
ಯೋಜನೆಯಡಿ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ಗಳನ್ನು ಒದಗಿಸುವಂತೆ ಸಮಿತಿಯು ರಾಜ್ಯ ಸರಕಾರಗಳಿಗೆ ನಿರ್ದೇಶ ನೀಡಿದೆ. ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ದೇಶದಲ್ಲಿಯ ತಮ್ಮ ಆಯ್ಕೆಯ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಶುಲ್ಕವನ್ನು ಪಾವತಿಸದೆ ಪ್ರವೇಶವನ್ನು ಪಡೆಯಲು ಫ್ರೀಶಿಪ್ ಕಾರ್ಡ್ ಅವಕಾಶ ಕಲ್ಪಿಸುತ್ತದೆ.







