ಮುಂಬೈ: ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವರ್ಗಾವಣೆ; ನೂತನ ಆಯುಕ್ತರಾಗಿ ಹೇಮಂತ್ ನಗರಾಲೆ ನೇಮಕ

ಮುಂಬೈ,ಮಾ.17: ಮುಂಬೈ ಮಹಾನಗರದ ನೂತನ ಪೊಲೀಸ್ ಆಯುಕ್ತರಾಗಿ ಮಹಾರಾಷ್ಟ್ರ ಡಿಜಿಪಿ ಹೇಮಂತ ನಗರಾಲೆ ಅವರನ್ನು ಬುಧವಾರ ನೇಮಕಗೊಳಿಸಲಾಗಿದೆ ಹಾಗೂ ಈವರೆಗೆ ಪೊಲೀಸ್ ಆಯುಕ್ತರಾಗಿದ್ದ ಪರಮಬೀರ್ ಸಿಂಗ್ ಅವರನ್ನು ಗೃಹರಕ್ಷಕ ದಳದ ಮಹಾನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಅನಿಲ ದೇಶಮುಖ ಅವರು ಟ್ವೀಟಿಸಿದ್ದಾರೆ.
ರಜನೀಶ ಶೇಠ್ ಅವರು ಡಿಜಿಪಿ ಹುದ್ದೆಯ ಹೆಚ್ಚುವರಿ ಹೊಣೆಯನ್ನು ವಹಿಸಿಕೊಳ್ಳಲಿದ್ದು,ಸಂಜಯ ಪಾಂಡೆ ಅವರಿಗೆ ಮಹಾರಾಜ್ಯ ರಾಜ್ಯ ಭದ್ರತಾ ನಿಗಮದ ಹೊಣೆಗಾರಿಕೆಯನ್ನು ವಹಿಸಲಾಗಿದೆ. ಕಳೆದ ತಿಂಗಳು ಕೈಗಾರಿಕೋದ್ಯಮಿ ಮುಕೇಶ ಅಂಬಾನಿಯವರ ನಿವಾಸದ ಹೊರಗೆ ಸ್ಫೋಟಕಗಳು ತುಂಬಿದ್ದ ವಾಹನ ಪತ್ತೆಯಾಗಿದ್ದ ಪ್ರಕರಣದ ತನಿಖೆಯ ನಡುವೆಯೇ ಸಿಂಗ್ ಬೆಳಿಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರನ್ನು ಭೇಟಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೈಂ ಬ್ರಾಂಚ್‌ನ ಪೊಲೀಸ್ ಅಧಿಕಾರಿ ಸಚಿನ್ ವಝೆಯವರನ್ನು ಎನ್‌ಎಐ ಬಂಧಿಸಿದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ ಎರಡು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ.





