ಚಿಕ್ಕಮಗಳೂರು: ಜಾತ್ರೆಗೆ ತೆರಳಿದ್ದ ವೇಳೆ ದಲಿತ ಮಹಿಳೆಗೆ ಲೈಂಗಿಕ ದೌರ್ಜನ್ಯ; ಆರೋಪ
ಐವರು ಆರೋಪಿಗಳ ಬಂಧನ

ಚಿಕ್ಕಮಗಳೂರು, ಮಾ.17: ಜಾತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳ ಗುಂಪೊಂದು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಮಹಿಳೆಯ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಅಂತರಘಟ್ಟೆಯಲ್ಲಿ ಬುಧವಾರ ಸಂಜೆ ವರದಿಯಾಗಿದ್ದು, ಈ ಸಂಬಂಧ ಅಜ್ಜಂಪುರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಜ್ಜಂಪುರ ಪಟ್ಟಣದ ಅಂಬೇಡ್ಕರ್ ಬಡಾವಣೆ ನಿವಾಸಿಗಳಾದ ಮಂಜನಾಯ್ಕ್ ಬುಧವಾರ ಸಂಜೆ ಅಂತರಘಟ್ಟೆಯ ದುರ್ಗಾಂಬ ದೇವಾಲಯದ ಜಾತ್ರೆಗೆಂದು ತೆರಳಿದ್ದಾರೆ. ಈ ವೇಳೆ ದೇವಾಲಯದ ಬಳಿಯೇ ಇದ್ದ ಆರು ಮಂದಿ ಕಿಡಿಗೇಡಿಗಳ ಗುಂಪು ಮಂಜನಾಯ್ಕ ಪತ್ನಿಯನ್ನು ಚುಡಾಯಿಸಿದ್ದಲ್ಲೇ ಸೀರೆಯನ್ನೂ ಎಳೆದಾಡಿದ್ದಾರೆ ಎನ್ನಲಾಗಿದೆ. ಇದನ್ನು ಮಂಜನಾಯ್ಕ್ ಹಾಗೂ ಪತ್ನಿ ಪ್ರಶ್ನಿಸಿದಾಗ ಕಿಡಿಗೇಡಿಗಳು ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮಂಜಾನಾಯ್ಕನ ಪತ್ನಿ ಪತಿಯ ಮೇಲಿನ ಹಲ್ಲೆ ತಡೆಯಲು ಮುಂದಾದಾಗ ಕಿಡಿಗೇಡಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಲಾಗಿದೆ.
ಹಲ್ಲೆಯಿಂದಾಗಿ ಮಂಜಾನಾಯ್ಕನ ಕೈ ಮುರಿತಕ್ಕೊಳಗಾಗಿದ್ದು, ಕಿಡಿಗೇಡಿಗಳ ಕೃತ್ಯದ ಬಗ್ಗೆ ಮಂಜಾನಾಯ್ಕ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲು ಮಾಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 6 ಮಂದಿ ಆರೋಪಿಗಳ ಪೈಕಿ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳನ್ನು ಅಜ್ಜಂಪುರದ ನಿವಾಸಿಗಳಾದ ಯೋಗೇಶ್, ಸಂತೋಷ್, ಮನು, ಶಿವಕುಮಾರ್, ಶಶಿಕುಮಾರ್ ಎಂದು ಗುರುತಿಸಲಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್. ತಿಳಿಸಿದ್ದಾರೆ.







