ಕಾಪಿರೈಟ್ ಕಾಯ್ದೆ ಉಲ್ಲಂಘನೆ ಪ್ರಕರಣ: ಕುವೆಂಪು ಸಮಗ್ರ 12 ಸಂಪುಟಗಳ ಮಾರಾಟಕ್ಕೆ ಹೈಕೋರ್ಟ್ ತಡೆ

ಬೆಂಗಳೂರು, ಜ.17: ಹಂಪಿ ಕನ್ನಡ ವಿಶ್ವವಿದ್ಯಾಲಯವು ಕಾಪಿರೈಟ್ ಕಾಯ್ದೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಹನ್ನೆರಡು ಸಂಪುಟಗಳ ಕುವೆಂಪು ಸಮಗ್ರ ಸಾಹಿತ್ಯ ಸರಣಿ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಈ ಸಂಬಂಧ ಹಿರಿಯ ಸಾಹಿತಿ ಪುಸಕ್ತಮನೆ ಹರಿಹರಪ್ರಿಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.
ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರು 1974ರಲ್ಲಿ ಬರೆದಿದ್ದ ಕುವೆಂಪು ಪತ್ರಗಳು ಪುಸ್ತಕದಿಂದ ಕುವೆಂಪು ಅವರ 62 ಪತ್ರಗಳನ್ನು ಯಥಾವತ್ತಾಗಿ ಕನ್ನಡ ವಿಶ್ವವಿದ್ಯಾಲಯ ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿದೆ ಎಂಬ ಆರೋಪವಿದೆ.
ಹರಿಹರಪ್ರಿಯ ಅವರು 2020ರ ಡಿ.15ರಂದು ವಿಶ್ವವಿದ್ಯಾಲಯಕ್ಕೆ ಕಾನೂನು ಪ್ರಕಾರ ನೋಟಿಸ್ ಕಳುಹಿಸಿದ್ದರು. ವಿವಿಯಿಂದ ಯಾವುದೇ ಪ್ರತಿಕ್ರಿಯೆ ಬರದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಶ್ವವಿದ್ಯಾಲಯದ ಸಿಂಡಿಕೇಟ್‍ನ ಸದಸ್ಯರ ಗಮನಕ್ಕೆ ವಿಷಯ ತಂದರೂ ಪ್ರಯೋಜನವಾಗಿಲ್ಲ. ವಿಧಿಯಿಲ್ಲದೆ ನ್ಯಾಯಾಲಯದ ಮೊರೆ ಹೋಗಿರುವೆ ಎಂದು ಹರಿಹರಪ್ರಿಯ ತಿಳಿಸಿದ್ದಾರೆ.
ಕೆ.ಸಿ.ಶಿವಾರೆಡ್ಡಿ ಸಂಪಾದಕತ್ವದ ಕುವೆಂಪು ಸಮಗ್ರ ಸಾಹಿತ್ಯವನ್ನು 2020ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. 12ನೆ ಸಂಪುಟಗಳಲ್ಲಿ ಪ್ರಕಟಿಸಿರುವ ಕುವೆಂಪು ಅವರ 62 ಪತ್ರಗಳೇ ಈಗ ವಿವಾದ ಸೃಷ್ಟಿಸಿವೆ.







