ಸರಕಾರಿ ಶಾಲಾ ಮಕ್ಕಳಿಗೆ ಶಿಕ್ಷಣಕ್ಕೆ ಕಾರ್ಪೋರೇಟ್ ಸಂಸ್ಥೆಗಳ ನೆರವು ಅಭಿನಂದನೀಯ: ಅನ್ಬುಕುಮಾರ್
ಬೆಂಗಳೂರು, ಮಾ. 17: ‘ಎಂಬೆಸ್ಸಿ ಹಾಗೂ ಎಎನ್‍ಝಡ್ ಬ್ಯಾಂಕಿಂಗ್ ಗ್ರೂಪ್ ರೀತಿಯ ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದ ಮೂಲಕ ಸರಕಾರಿ ಶಾಲೆಯ ಮಕ್ಕಳಿಗೆ ಸಮಾನ ಶಿಕ್ಷಣ ದೊರೆಯುವಂತೆ ಮಾಡಲು ಅಗತ್ಯ ಸಹಕಾರ ನೀಡಿರುವುದು ಅಭಿನಂದನೀಯ ಕಾರ್ಯವಾಗಿದೆ' ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿ.ಅನ್ಬುಕುಮಾರ್ ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬುಧವಾರ ಇಲ್ಲಿನ ಹೆಗಡೆ ನಗರದಲ್ಲಿ ಎಂಬೆಸ್ಸಿ ಹಾಗೂ ಎಎನ್‍ಝಡ್ ಬ್ಯಾಂಕಿಂಗ್ ಗ್ರೂಪ್ ನೆರವಿನಿಂದ ನಿರ್ಮಿಸಿರುವ ಸರಕಾರಿ ಉರ್ದು ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣ ವ್ಯವಸ್ಥೆಯನ್ನು ಸದೃಢಗೊಳಿಸಲು ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬರಬೇಕು ಎಂದು ಕೋರಿದರು.
ಎಂಬೆಸ್ಸಿ ಆರ್‍ಇಐಟಿಯ ಸಿಇಒ ಮೈಕ್ ಹೊಲ್ಯಾಂಡ್, ಸಾಮಾಜಿಕ ಹೊಣೆಗಾರಿಕೆಯಡಿ ಸರಕಾರಿ ಶಾಲೆಗಳಲ್ಲಿ ದುರ್ಬಲ ಸಮುದಾಯಗಳ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ನೆರವು ನೀಡಿದ್ದೇವೆ. ಮಕ್ಕಳ ಭವಿಷ್ಯದ ಯಶಸ್ಸು ದೊರೆಯುವಂತೆ ಮಾಡಲು ಸುರಕ್ಷಿತ ಮತ್ತು ಉತ್ತಮ ಕಲಿಕಾ ಪರಿಸರ ಸೃಷ್ಟಿಸುವುದು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
15 ಸಾವಿರ ಚದರ ಅಡಿ ವಿಸ್ತೀರ್ಣದ ಹೊಸ ಸರಕಾರಿ ಶಾಲಾ ಕಟ್ಟಡವನ್ನು 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 19 ಶಾಲಾ ಕೊಠಡಿಗಳ ಸಹಿತ, ಸಿಬ್ಬಂದಿ ಕೊಠಡಿ, ಗ್ರಂಥಾಲಯ ಹಾಗೂ ಕಂಪ್ಯೂಟರ್ ಲ್ಯಾಬ್, ಸಭಾಂಗಣ, ಶೌಚಾಲಯಗಳು, ಸುಸಜ್ಜಿತ ಆಟದ ಮೈದಾನ ಹೊಂದಿದೆ. 2019ರ ಅಕ್ಟೋಬರ್ ನಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭವಾಯಿತು ಮತ್ತು ಸಾಂಕ್ರಾಮಿಕದ ನಡುವೆಯೂ 16 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಎಎನ್‍ಝಡ್ ಬೆಂಗಳೂರು ಸರ್ವೀಸ್ ಸೆಂಟರ್‍ನ ವ್ಯವಸ್ಥಾಪಕ ನಿರ್ದೇಶಕ ಎಸ್.ವಿ.ವೆಂಕಟರಾಮನ್, ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ, ಎಂಬೆಸ್ಸಿ ಸಮೂಹದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಿತು ವಿರ್ವಾನಿ ಸೇರಿದಂತೆ ಇನ್ನಿತರರು ಹಾಜರಿದ್ದರು.







