ಬಾಲ ಕಾರ್ಮಿಕರ ಪತ್ತೆಗೆ ಮರು ಸರ್ವೆ : ಕಾರ್ಮಿಕ ಇಲಾಖೆಗೆ ಮಕ್ಕಳ ಹಕ್ಕುಗಳ ಆಯೋಗದ ಸೂಚನೆ
ಮಂಗಳೂರು, ಮಾ.17: ದ.ಕ.ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಗುರುತಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ ವಹಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಒಂದು ತಿಂಗಳಲ್ಲಿ ಮರು ಸರ್ವೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ.
ದ.ಕ. ಜಿಲ್ಲಾ ಪಂಚಾಯ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಆಯೋಗದ ಅಧ್ಯಕ್ಷ ಡಾ. ಅಂತೋಣಿ ಸೆಬಾಸ್ಟಿಯನ್ ಅಧ್ಯಕ್ಷತೆ ಯಲ್ಲಿ ನಡೆದ ಬಾಲನ್ಯಾಯ ಕಾಯಿದೆ, ಆರ್‌ಟಿಇ ಹಾಗೂ ಪೋಕ್ಸೋ ಕಾಯಿದೆ ಅನುಷ್ಠಾನದ ಕುರಿತಂತೆ ವಿವಿಧ ಇಲಾಖೆಗಳು ಹಾಗೂ ಸರಕಾರೇತರ ಸಂಸ್ಥೆಗಳ ಮುಖ್ಯಸ್ಥರ ಜತೆಗಿನ ಸಮಾಲೋಚನಾ ಸಭೆಯಲ್ಲಿ ಈ ಸೂಚನೆ ನೀಡಲಾಯಿತು.
ಸಭೆಯಲ್ಲಿ ಬಾಲ ಕಾರ್ಮಿಕರ ಕುರಿತಂತೆ ಚರ್ಚೆಯ ವೇಳೆ, ದ.ಕ. ಜಿಲ್ಲೆಯಲ್ಲಿ 2018-19ರಲ್ಲಿ ಇಬ್ಬರು ಬಾಲಕಾರ್ಮಿಕರು, 19-20ರಲ್ಲಿ ಮೂವರು, 20-21ರಲ್ಲಿ ಇಬ್ಬರು ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಆಯೋಗದ ಸದಸ್ಯರೊಬ್ಬರು ಪ್ರತಿಕ್ರಿಯಿಸಿ ಇಂದು ಬೆಳಗ್ಗೆ ನಾವು ನಗರದ ಮೀನು ಮಾರುಕಟ್ಟೆಗೆ ಹೋದಾಗ ಅರ್ಧ ತಾಸಿನಲ್ಲಿಯೇ 8 ಮಂದಿ ಬಾಲ ಕಾರ್ಮಿಕರನ್ನು ಕಂಡು ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಿದ್ದೇವೆ. ಹಾಗಾದರೆ ಎರಡು ವರ್ಷದಲ್ಲಿ ಈ ಅಂಕಿ 2ಕ್ಕಿಂತ ಮೇಲೆ ಹೋಗಿಲ್ಲ ಎಂದರೆ ಅನುಮಾನವಾಗುತ್ತಿದೆ. ಕೇವಲ ಇಬ್ಬರನ್ನು ಪತ್ತೆಹಚ್ಚಲು ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಇಡೀ ವರ್ಷ ಸರ್ಕಾರಿ ವೇತನ ಕೊಟ್ಟು ಇರಿಸಬೇಕಾ? ನಿಮ್ಮನ್ನು ಬೇರೆ ಇಲಾಖೆಗೆ ಏಕೆ ವರ್ಗಾಯಿಸಬಾರದು ಎಂದು ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ತರಾಟೆಗೈದರು.
ಹೊರ ಜಿಲ್ಲೆಗಳಿಂದ ಬಂದ ಕುಟುಂಬದ ಜತೆ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳೂ ಈ ಚೈಲ್ಡ್‌ಲೈನ್‌ನಿಂದ ಗುರುತಿಸಲಾದ ಮಕ್ಕಳಲ್ಲಿ ಸೇರಿದ್ದಾರೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಹೇಳಿದಾಗ ಸಮಾಧಾನಗೊಳ್ಳದ ಆಯೋಗದ ಅಧ್ಯಕ್ಷರು ಇಲಾಖೆ ಗಳ ನಡುವೆ ಪರಸ್ಪರ ಸಹಕಾರ ಹಾಗೂ ಸಹಯೋಗದ ಕೊರತೆ ಇದೆ. ಕಾರ್ಮಿಕ ಇಲಾಖೆ ಮಾತ್ರ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚುವ ಜವಾಬ್ಧಾರಿ ಹೊಂದಿರುವುದಲ್ಲ. ಇತರ ಇಲಾಖೆಗಳೂ ಜವಾಬ್ಧಾರರು. ಈ ಬಗ್ಗೆ ಮರು ಸರ್ವೆ ನಡೆಸಿ ವರದಿ ನೀಡಿ ಎಂದು ನಿರ್ದೇಶಿಸಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಪ್ರತಿಕ್ರಿಯಿಸಿ, ಕಳೆದ ಒಂದು ತಿಂಗಳಿನಿಂದ ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮೊಬೈಲ್ ಆ್ಯಪ್ ಬಳಸಿ ಸಮೀಕ್ಷೆ ಮಾಡಲಾಗುತ್ತಿದೆ. 2,25,0000 ಕುಟುಂಬಗಳಲ್ಲಿ 23000 ಮನೆಗಳ ಸರ್ವೆ ಪೂರ್ಣವಾಗಿದೆ. ಈವರೆಗೆ 124 ಮಕ್ಕಳು ವಿವಿಧ ಕಾರಣಗಳಿಂದ ಶಾಲೆ ಬಿಟ್ಟಿರುವುದು ಗಮನಕ್ಕೆ ಬಂದಿದ್ದು, ಯಾವ ಕಾರಣದಿಂದ ಶಾಲೆ ಬಿಡಲಾಗಿದೆ ಎಂದು ಶಿಕ್ಷಣ ಇಲಾಖೆ ಗಮನ ಹರಿಸಿ ದಾಖ ಲಾತಿಗೆ ಕ್ರಮ ವಹಿಸಲಾಗಿದೆ. ಇದೇ ವೇಳೆ ಬಾಲ ಕಾರ್ಮಿಕರ ಪತ್ತೆಗೆ ಸಂಬಂಧಿಸಿ ವಾಣಿಜ್ಯ, ಕೈಗಾರಿಕಾ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸಲಾಗುತ್ತಿದೆ ಎಂದರು.
ಅಪ್ರಾಪ್ತರನ್ನು ಬಂಧಿಸುವಂತಿಲ್ಲ
ಜಿಲ್ಲೆಯಲ್ಲಿ ಗಂಭೀರ ಬಾಲಾಪರಾಧದ 49, ಕ್ಷುಲ್ಲಕ 65 ಪ್ರಕರಣಗಳು ಸೇರಿದಂತೆ ಒಟ್ಟು 206 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಕರಣ ಯಾವುದೇ ಇರಲಿ, ಅಪ್ರಾಪ್ತರನ್ನು ಬಂಧಿಸುವುದು ಜೆಜೆ ಕಾಯ್ದೆ ಉಲ್ಲಂಘನೆ ಎನ್ನುವುದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದ ಡಾ.ಅಂತೋಣಿ ಸೆಬಾಸ್ಟಿಯನ್, ಅಪ್ರಾಪ್ತರ ಅಪರಾಧ ಪ್ರಕರಣಗಳು ನಡೆದಾಗ ಪೊಲೀಸ್ ಠಾಣೆ ಹಂತದಲ್ಲೇ ಅವರಿಗೆ ಸಮಾ ಲೋಚನೆ ನಡೆಸಿ ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಬೇಕು. ಯಾವುದೇ ಕಾರಣಕ್ಕೂ ಬಂಧಿಸುವಂತಿಲ್ಲ ಎಂದು ಸೂಚನೆ ನೀಡಿದರು.
ಶಾಲೆ ಕಾಲೇಜಲ್ಲಿ ಎಸ್ಸಿ ಎಸ್ಟಿ ಮಕ್ಕಳಿಂದ ಖಾಲಿ ಚೆಕ್ !
ಜಿಲ್ಲೆಯ ಶಾಲೆ, ಕಾಲೇಜುಗಳು ಎಸ್ಸಿ ಎಸ್ಟಿ ಮಕ್ಕಳಿಂದ ಖಾಲಿ ಚೆಕ್‌ಗೆ ಬೇಡಿಕೆ ಸಲ್ಲಿಸುತ್ತಿರುವ ಹಲವು ಪ್ರಕರಣಗಳು ಗಮನಕ್ಕೆ ಬಂದಿವೆ. ಸುಳ್ಯದಲ್ಲಿ ಇಂತಹ ದೂರು ಬಂದಾಗ ಅಲ್ಲಿನ ಇಒ ಮತ್ತು ತಹಸೀಲ್ದಾರ್ ಉತ್ತಮವಾಗಿ ಸ್ಪಂದಿಸಿದ್ದಾರೆ. ಮುಂದೆ ಇಂತಹ ಪ್ರಕರಣಗಳು ನಡೆದರೆ ಅಂತಹ ಶಿಕ್ಷಣ ಸಂಸ್ಥೆಯನ್ನೇ ಮುಚ್ಚಬೇಕಾದೀತು ಎಂದು ಆಯೋಗದ ಸದಸ್ಯರು ಎಚ್ಚರಿಕೆ ನೀಡಿದರು.
ಆಯೋಗದ ಸದಸ್ಯರಾದ ಪರಶುರಾಮ್ ಎಂ.ಎಲ್., ರಾಘವೇಂದ್ರ, ಭಾರತಿ, ಶಂಕರಪ್ಪ, ಅಶೋಕ್ ಎರಗಟ್ಟ್ಪಿ ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪಾಪ ಬೋವಿ ಸ್ವಾಗತಿಸಿದರು. ಮಕ್ಕಳ ರಕ್ಷಣಾಧಿಕಾರಿ ಗರ್ಟ್ರೂಡ್ ವೇಗಸ್ ವರದಿ ಮಂಡಿಸಿ, ವಂದಿಸಿದರು.
ಪೋಕ್ಸೋ ಪ್ರಕರಣ: ಸ್ವಯಂ ಪ್ರೇರಿತ ಕ್ರಮಕ್ಕೆ ಆಯೋಗ ನಿರ್ಧಾರ
ಸುರತ್ಕಲ್‌ನಲ್ಲಿ ನಡೆದ ಪೋಕ್ಸೋ ಪ್ರಕರಣವೊಂದಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸದಿರುವ ಪ್ರಕರಣದ ಕುರಿತಂತೆ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಯೋಗದ ಅಧ್ಯಕ್ಷ ಡಾ. ಅಂತೋಣಿ ಸೆಬಾಸ್ಟಿಯನ್ ಪ್ರತಿಕ್ರಿಯಿಸಿ, ಯಾವುದೇ ಪೋಕ್ಸೋ ಪ್ರಕರಣ ನಡೆದರೂ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಬೇಕು. ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಿದ್ದೇವೆ ಎಂದರು. ಮಕ್ಕಳಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿಸೋಜಾ ಪ್ರತಿಕ್ರಿಯಿಸಿ, ಈ ಪ್ರಕರಣ ನೇರವಾಗಿ ಪೊಲೀಸ್ ಠಾಣೆಗೇ ಬಂದಿತ್ತು. ಪ್ರಕರಣದಲ್ಲಿ ಮಗುವ್ನನು ರಕ್ಷಿಸಿ ಅಗತ್ಯ ಕ್ರಮ ವಹಿಸಿ ಸಂಬಂಧಪಟ್ಟ ಇಲಾಖೆಗೆ ವರದಿ ನೀಡಲಾಗಿತ್ತು. ಈ ಬಗ್ಗೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿತ್ತು ಎಂದು ರೆನ್ನಿ ಡಿಸೋಜಾ ಹೇಳಿದರು.
ಇನ್ನೂ ಪತ್ತೆಯಾಗದ 55 ಮಕ್ಕಳು
ಜಿಲ್ಲೆಯಲ್ಲಿ 2017ರಿಂದ 20ರವರೆಗೆ 177 ಮಕ್ಕಳು ನಾಪತ್ತೆಯಾಗಿದ್ದು, ಅವರಲ್ಲಿ 122 ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಉಳಿದ 55 ಮಕ್ಕಳ ಪತ್ತೆ ಇನ್ನೂ ಆಗಿಲ್ಲ. ಆ ಮಕ್ಕಳು ಮಾನವ ಕಳ್ಳಸಾಗಣೆ, ಕೊಲೆ ಇತ್ಯಾದಿಗಳಿಗೆ ಒಳಗಾಗಿರುವ ಸಾಧ್ಯತೆಯೂ ಇದೆ. ಈ ಪ್ರಕರಣಗಳ ತನಿಖೆ ಯಾವ ಹಂತದಲ್ಲಿದೆ? ಆ ಮಕ್ಕಳ ತಂದೆ- ತಾಯಿಗೆ ಏನು ಉತ್ತರ ಕೊಡ್ತೀರಾ ಎಂದು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಲು ಪೊಲೀಸ್ ಇಲಾಖೆಯಿಂದ ಜವಾಬ್ದಾರಿಯುತ ಅಧಿಕಾರಿ ಸಭೆಯಲ್ಲಿ ಲ್ಲದ ಬಗ್ಗೆ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ಎಂಡೋ ಪೀಡಿತ ಮಕ್ಕಳ ಸೌಲಭ್ಯ ಮಾಹಿತಿ ನೀಡಿ
ದ.ಕ. ಜಿಲ್ಲೆಯಲ್ಲಿ 504 ಎಂಡೋಸಲ್ಫಾನ್ ಪೀಡಿತ ಅಂಗವಿಕಲ ಮಕ್ಕಳಿದ್ದು, ಅವರಿಗೆ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ನೀಡಬೇಕಾಗಿದೆ. ಬಹುತೇಕ ಮಕ್ಕಳ ಪೋಷಕರಿಗೆ ತಮಗೆ ಸಿಗುವ ಸೌಲಭ್ಯಗಳ ಮಾಹಿತಿಯೇ ಇಲ್ಲ. ಪುನರ್ವಸತಿ ಕೇಂದ್ರದಲ್ಲಿ ಇರಲು ಸಾಧ್ಯವಾಗದ ಮಕ್ಕಳಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಬೇಕು. ಮನೆಯಲ್ಲೇ ಇರುವ ಮಕ್ಕಳಿಗೆ ಶಿಕ್ಷಕರೇ ಹೋಗಿ ಕೌಶಲ್ಯ ಗಳನ್ನು ಕಲಿಸಬೇಕಿದೆ. ಹಾಗಾಗಿ ಎಷ್ಟು ಮಂದಿ ಎಂಡೋ ಪೀಡಿತ ಮಕ್ಕಳಿಗೆ ಶಿಕ್ಷಣ ಮತ್ತು ಇತರ ಸೌಲಭ್ಯ ಸಿಗುತ್ತಿದೆ ಎಂಬ ಬಗ್ಗೆ ವರದಿ ನೀಡುವಂತೆ ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಅವರು ಡಿಡಿಪಿಐಗೆ ಸೂಚಿಸಿದರು.







