ರಾಜಕೀಯ ನೇತಾರರ ವಿರುದ್ದ ಅಸಮಾಧಾನ: 1,000 ರೈತರಿಂದ ನಾಮಪತ್ರ ಸಲ್ಲಿಕೆಗೆ ತಯಾರಿ

ಚೆನ್ನೈ: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಕಂಗೇಯಂ ಕ್ಷೇತ್ರದಿಂದ ತಮಿಳುನಾಡಿನ 1,000 ರೈತರು ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ.
ಕಂಗೇಯಂ ವಿಧಾನಸಭಾ ಕ್ಷೇತ್ರವು ತಿರುಪುರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಪರಂಬಿಕುಲಂ-ಅಲಿಯಾರ್ ಯೋಜನೆಯಿಂದ ನೀರನ್ನು ಬಿಡುಗಡೆ ಮಾಡುವ ಬೇಡಿಕೆಗಳು “ಕಿವುಡರ ಕಿವಿಗೆ ಬಿದ್ದಿವೆ’ ಎಂಬ ಕಾರಣಕ್ಕೆ ನಾವು ಈ ನಾಮಪತ್ರಗಳನ್ನು ಸಲ್ಲಿಸುತ್ತಿದ್ದೇವೆ ಎಂದು ರೈತರು ತಿಳಿಸಿದ್ದಾರೆ.
ಕಳೆದ ವರ್ಷ ವೆಲ್ಲಕೋಯಿಲ್ ಶಾಖೆಯ ಕಾಲುವೆ ಜಲ ಸಂರಕ್ಷಣಾ ಸಮಿತಿಯ ರೈತರು ಐದು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಕುಳಿತು ಯೋಜನೆಯಿಂದ ನೀರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದರು. ಮುಖ್ಯಮಂತ್ರಿ ಪಳನಿಸ್ವಾಮಿ ಅವರೊಂದಿಗಿನ ಸಭೆಯ ನಂತರ ಉಪವಾಸ ಸತ್ಯಾಗ್ರಹವನ್ನು ರದ್ದುಪಡಿಸಲಾಗಿತ್ತು. ಸಭೆಯ ಹೊರತಾಗಿಯೂ ರೈತರ ಬೇಡಿಕೆಗಳು ಈಡೇರಿಲ್ಲ ಎಂದು ವರದಿಯಾಗಿದೆ.
“ಯಾವುದೇ ಪರಿಹಾರ ಕಂಡುಬಂದಿಲ್ಲವಾದ್ದರಿಂದ ರೈತರು ಕಂಗೇಯಂ ಕ್ಷೇತ್ರದಿಂದ 1,000 ನಾಮಪತ್ರಗಳನ್ನು ಸಲ್ಲಿಸಲು ನಿರ್ಧರಿಸಿದರು. ಸಮಿತಿಯ ಸದಸ್ಯನೊಬ್ಬ ಮಂಗಳವಾರ ತನ್ನ ನಾಮಪತ್ರ ಸಲ್ಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಬುಧವಾರ 10ಕ್ಕೂ ನಾಮಪತ್ರ ಸಲ್ಲಿಕೆಯಾಗಿದ್ದು, ಗುರುವಾರ ಹಾಗೂ ಶುಕ್ರವಾರ ಇನ್ನಷ್ಟು ನಾಮಪತ್ರಗಳು ಸಲ್ಲಿಕೆಯಾಗಲಿದ್ದು, ಒಟ್ಟ ನಾಮಪತ್ರಗಳ ಸಂಖ್ಯೆ 1,000 ತಲುಪುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ರೈತರ ಈಗಿನ ನಿರ್ಧಾರವು 25 ವರ್ಷಗಳ ಹಿಂದೆ ಈರೋಡ್ ಜಿಲ್ಲೆಯ ಮೊಡಾಕುರಿಚಿಯ ರೈತರ ನಿಲುವನ್ನು ನೆನಪಿಸಿದೆ. 1996ರಲ್ಲಿ 1,016 ರೈತರು ಮೊಡಾಕುರಿಚಿ ಅಸೆಂಬ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಈ ಕ್ಷೇತ್ರದಲ್ಲಿ ಒಟ್ಟು 1,033 ನಾಮಪತ್ರ ಸಲ್ಲಿಕೆಯಾಗಿದ್ದವು. ಇದು ಚುನಾವಣಾ ಆಯೋಗಕ್ಕೆ ತಲೆನೋವಾಗಿತ್ತು. ಚುನಾವಣೆಯಲ್ಲಿ ಡಿಎಂಕೆಯ ಸುಬ್ಬುಲಕ್ಷ್ಮೀ ಅವರು ಎಐಎಡಿಎಂಕೆಯ ಕುಟ್ಟುಸಾಮಿಯನ್ನು ಮಣಿಸಿದ್ದರು.







