ನಾವು ಕೊರೋನ ಸೋಂಕಿನ 2ನೇ ಅಲೆ ತಡೆಯಬೇಕು: ಪ್ರಧಾನಿ

ಹೊಸದಿಲ್ಲಿ, ಮಾ. 17: ಕೊರೋನ ಸೋಂಕು ಹರಡುವುದನ್ನು ತಡೆಯಲು ತ್ವರಿತ ಹಾಗೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಬುಧವಾರ ಆಗ್ರಹಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನ ಸೋಂಕಿನ ಎರಡನೇ ಅಲೆಯನ್ನು ತತ್‌ಕ್ಷಣವೇ ನಿಲ್ಲಿಸಬೇಕಾಗಿದೆ ಎಂದಿದ್ದಾರೆ.
ವೀಡಿಯೊ ಕಾನ್ಫೆರನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಮಾತನಾಡಿದರು.
ಕೊರೋನ ಸೋಂಕಿ ಎರಡನೇ ಅಲೆಯ ವಿರುದ್ಧ ಹೋರಾಡಲು ತಾನು ಐದು ಅಂಶಗಳ ಯೋಜನೆ ರೂಪಿಸಿರುವುದರಿಂದ ಜಿಲ್ಲಾ ಅಧಿಕಾರಿಗಳು ಅಗತ್ಯ ಇರುವ ಕಡೆಗಳಲ್ಲಿ ಸೂಕ್ಷ್ಮ ಕಂಟೈನ್ಮೆಂಟ್ ವಲಯಗಳನ್ನು ರೂಪಿಸಬಹುದು ಎಂದು ಪ್ರಧಾನಿ ಅವರು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದರು.
ತನ್ನ ‘‘ಔಷದವೂ ಬೇಕು, ಎಚ್ಚರಿಕೆಯೂ ಬೇಕು’’ ಎಂಬ ಜನಪ್ರಿಯ ಘೋಷಣೆಯನ್ನು ಪುನರುಚ್ಚರಿಸಿದ ಪ್ರಧಾನಿ ಅವರು, ರಾಜ್ಯಗಳು ಪರೀಕ್ಷೆ ಹಾಗೂ ಲಸಿಕೆ ನೀಡಿಕೆಯನ್ನು ಹೆಚ್ಚಿಸಬೇಕು ಹಾಗೂ ಲಸಿಕೆ ಪೋಲಾಗುವುದನ್ನು ತಡೆಯಬೇಕು ಎಂದರು.
ಅವರ ಐದು ಅಂಶಗಳ ಯೋಜನೆಯಲ್ಲಿ ಮೊದಲನೆಯದ್ದು ಕೊರೋನ ತಡೆಯಲು ಸೂಕ್ತವಾದ ನಡವಳಿಕೆ ಬಗ್ಗೆ ಹೇಳಿದೆ. ಇದಲ್ಲದೆ, ರಾಜ್ಯಗಳು ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಬೇಕು, ಅತಿಸೂಕ್ಷ್ಮ ಕಂಟೈನ್ಮೆಂಟ್ ವಲಯಗಳನ್ನು ರೂಪಿಸಬೇಕು, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಿಕೆಯನ್ನು ಹೆಚ್ಚಿಸಬೇಕು ಹಾಗೂ ಲಸಿಕೆ ಪೋಲಾಗುವುದನ್ನು ತಡೆಯಬೇಕು ಎಂದು ಹೇಳಿದೆ.
ದೇಶದ ಸುಮಾರು 70 ಜಿಲ್ಲೆಗಳಲ್ಲಿ ಕಳೆದ ಒಂದು ವಾರಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಶೇ. 150ಕ್ಕಿಂತಲೂ ಅಧಿಕ ಏರಿಕೆಯಾಗಿದೆ ಎಂದು ಹೇಳಿದ ಪ್ರಧಾನಿ ಅವರು, ಕೊರೋನ ಸೋಂಕು ಹರಡುವುದನ್ನು ತಡೆಯದೇ ಇದ್ದರೆ, ರಾಷ್ಟ್ರವ್ಯಾಪಿ ಕೊರೋನ ಸೋಂಕು ಹರಡುವ ಪರಿಸ್ಥಿತಿ ಬರಬಹುದು ಎಂದರು. ಇದೇ ಸಂದರ್ಭ ಜನರಲ್ಲಿ ಆತಂಕ ಸೃಷ್ಟಿಸಬೇಡಿ ಎಂದು ಅವರು ಒತ್ತಿ ಹೇಳಿದರು.
ಕೋವಿಡ್ ಪರಿಸ್ಥಿತಿಯನ್ನು ಭಾರತ ಹಾಗೂ ಜಗತ್ತಿನೊಂದಿಗೆ ಹೊಲಿಸಿದ ಪ್ರದಾನಿ ಅವರು, ಜಗತ್ತಿನ ಹೆಚ್ಚಿನ ಕೊರೋನ ಸೋಂಕು ಬಾಧಿತ ದೇಶಗಳು ಕೊರೋನ ಸೋಂಕಿನ ಹಲವು ಅಲೆಗಳನ್ನು ಎದುರಿಸಿವೆ. ಆದರೆ, ಕೊರೋನ ಸೋಂಕಿನ ಎರಡನೇ ಅಲೆ ಬರದಂತೆ ತಡೆಯಲು ಭಾರತ ಯಶಸ್ವಿಯಾಗಿದೆ ಎಂದರು.
ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಪರಿಸ್ಥಿತಿ ಕುರಿತು ಮಾತನಾಡಿದ ಪ್ರಧಾನಿ, ಈ ಎರಡೂ ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ದರ ಅತ್ಯಧಿಕ ಇದೆ. ಅಲ್ಲದೆ ಪ್ರತಿ ದಿನದ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದರು.







