ನನ್ನ ಮೇಲೆ ಯಾಕಿಷ್ಟು ದ್ವೇಷ ?: ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ಶಾಸಕ ಸಾ.ರಾ.ಮಹೇಶ್

ಮೈಸೂರು,ಮಾ.17: ನನ್ನ ಮೇಲೆ ಯಾಕಿಷ್ಟು ದ್ವೇಷ, ನಾನು ಏನು ತಪ್ಪು ಮಾಡಿದ್ದೇನೆ. ಜೆಡಿಎಸ್ ಪಕ್ಷದ ಉಳಿವಿಗಾಗಿ ಬೇಕಾದರೆ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯತ್ತೇನೆ, ದಯವಿಟ್ಟು ಪಕ್ಷದ ನೇತೃತ್ವವನ್ನು ನೀವೆ ವಹಿಸಿಕೊಳ್ಳಿ ಎಂದು ಶಾಸಕ ಜಿ.ಟಿ.ದೇವೇಗೌಡರಲ್ಲಿ ಪರಿ ಪರಿಯಾಗಿ ವಿನಂತಿಸಿಕೊಳ್ಳುವ ಮೂಲಕ ಶಾಸಕ ಸಾ.ರಾ.ಮಹೇಶ್ ಕಣ್ಣೀರು ಹಾಕಿದ ಘಟನೆ ನಡೆಯಿತು.
ನಗರದ ಶಾಸಕ ಸಾ.ರಾ.ಮಹೇಶ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚೆಗೆ ಶಾಸಕ ಸಾ.ರಾ.ಮಹೇಶ್ ಹೆಸರೇಳದೆ, ಶಕುನಿ, ಮಂಥರೆ ಗಳ ಮಾತು ಕೇಳಿ ಕುಮಾರಸ್ವಾಮಿ ಹಾಳಾಗುತ್ತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಟೀಕಿಸಿದ್ದರು. ಜೊತೆಗೆ ಮೈಮುಲ್ ಚುನಾವಣೆಯಲ್ಲಿ ಶಾಸಕ ಸಾ.ರಾ.ಮಹೇಶ್ ಬಣ ಹಿನ್ನಡೆ ಅನುಭವಿಸಿ ಶಾಸಕ ಜಿ.ಟಿ.ದೇವೇಗೌಡ ಬಣ ಭರ್ಜರಿ ಜಯಭೇರಿ ಬಾರಿಸಿದ ಹಿನ್ನಲೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.
ಪದೇ ಪದೇ ಜಿ.ಟಿ.ದೇವೇಗೌಡರು ನನ್ನನ್ನು ಟೀಕಿಸುತ್ತಕೇ ಇದ್ದಾರೆ, ನಾನು ಏನು ತಪ್ಪು ಮಾಡಿದ್ದೇನೆ, ಯಾಕಿಷ್ಟು ದ್ವೇಷ ಸಾಧಿಸುತ್ತಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ ಎಂದು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬಂದು ಹೇಳಲಿ, ನನ್ನ ಇನ್ನೆರಡು ವರ್ಷದ ಶಾಸಕ ಅವಧಿ ಮುಗಿದ ತಕ್ಷಣ ಜೆಡಿಎಸ್ ಪಕ್ಷ ಉಳಿವಿಗಾಗಿ ರಾಜಕೀಯ ನಿವೃತ್ತಿಯನ್ನು ಪಡೆಯತ್ತೇನೆ ಎಂದು ಹೇಳಿದರು.
ಮಹಾಭಾರತದಲ್ಲಿ ಶಕುನಿ ಇಲ್ಲದಿದ್ದರೆ ಮಹಾಭಾರತ ನಡೆಯತ್ತಿರಲಿಲ್ಲ. ಧರ್ಮ ರಾಜ್ಯ ಸ್ಥಾಪನೆಯಾಗುತ್ತಿರಲಿಲ್ಲ. ರಾಮಾಯಣದಲ್ಲಿ ಮಂಥರೆ ಇಲ್ಲದಿದ್ದರೆ ಶಬರಿ ಶಾಪ ವಿಮೋಚನೆಯಾಗುತ್ತಿರಲಿಲ್ಲ. ರಾವಣ ನಿರ್ನಾಮವಾಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಸಹಕಾರ ಚುನಾವಣೆಯಲ್ಲಿ ರಾಜಕೀಯ ಬೆರಸಬಾರದು ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಹಾಗಿದ್ದ ಮೇಲೆ ಇವರು ಯಾಕೆ ಜೆಡಿಎಸ್ ಕಾಂಗ್ರಸ್ ಮೈತ್ರಿ ಸರ್ಕಾರದಲ್ಲಿ ಸಹಕಾರ ಚುನಾವಣೆಯಲ್ಲಿ ರಾಜಕೀಯ ಮಾಡಿ ಸುನೀತಾ ವೀರಪ್ಪ ಗೌಡರನ್ನು ಗೆಲ್ಲಿಸಿದರು ಎಂದು ಪ್ರಶ್ನಿಸಿದರು.
ಯಾರು ಇರಲಿ ಬಿಡಲಿ ಜೆಡಿಎಸ್ ಪಕ್ಷ ಇದ್ದೇ ಇರುತ್ತದೆ. ಅದನ್ನು ಕಾರ್ಯಕರ್ತರು ಕಟ್ಟಿ ಬೆಳೆಸುತ್ತಾರೆ. ಈ ಪಕ್ಷದ ಋಣ ಉಂಡು ಪಕ್ಷಕ್ಕೆ ದ್ರೋಹ ಬಗೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಿ.ಟಿ.ದೇವೇಗೌಡ ನಾನು ಸಹಕಾರ ಕ್ಷೇತ್ರದಲ್ಲಿ ದೊಡ್ಡ ಆಲದ ಮರ ಎಂದು ಹೇಳಿಕೊಂಡಿದ್ದಾರೆ. ಆದರೆ ಆಲದ ಮರ ತನ್ನ ಬುಡದ ಕೆಳಗೆ ಬೇರೆ ಯಾವ ಸಸಿ ಬೆಳೆಯಲು ಅವಕಾಶ ನೀಡುವುದಿಲ್ಲ ಎಂದು ತಿರುಗೇಟು ನೀಡಿದರು.
ಈ ಆಲದ ಮರ ಇಷ್ಟೊಂದು ಎತ್ತರಕ್ಕೆ ಬೆಳೆಯಲು, ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ ಅವರು ನೀರನ್ನು ಹಾಕಿದ್ದಾರೆ. ಇದನ್ನು ಮರೆಯಬಾರದು ಎಂದು ಕುಟುಕಿದರು.
ಮೈಮುಲ್ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾದರೂ ನಾವು ಅವರಿಗೆ ತಕ್ಕ ಉತ್ತರ ನೀಡಿದ್ದೇವೆ. ಈ ಚುನಾವಣೆ ಒಂದು ತಿಂಗಳ ಮುಂಚಿತವಾಗಿ ಯಾರು ಆಯ್ಕೆಯಾಗಬೇಕು ಎಂದು ನಿರ್ಧಾರವಾಗಿತ್ತು, ಆದರೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಎಚ್.ಡಿ.ಕುಮಾರಸ್ವಾಮಿ ಪ್ರಚಾರ ಮಾಡಿದರೇ ಹೊರತು ರಾಜಕೀಯ ಮಾಡಲಿಕ್ಕೆ ಅಲ್ಲ. ಆಲದ ಮರಕ್ಕಿಂತ ಬೇರೆ ಯಾವ ಸಸಿ ಉತ್ತಮ ಎಂದು ತಿಳಿದುಕೊಂಡು ಸಸಿ ನೆಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎನ್.ನರಸಿಂಹಸ್ವಾಮಿ, ನಗರಾಧ್ಯಕ್ಷ ಚಲುವೇಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು







