ಇಷ್ಟದಂತೆ ವರದಿ ಬರೆಸಿಕೊಳ್ಳಲು ಉನ್ನತ ಸಮಿತಿ ರಚನೆ: ಸಿದ್ದರಾಮಯ್ಯ ಟೀಕೆ
ಪ್ರಬಲ ಸಮುದಾಯಗಳಿಗೆ 2ಎ ಮೀಸಲಾತಿ ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಮಾ.17: ಮೀಸಲಾತಿ ಸಂಬಂಧ ತಮ್ಮ ಇಷ್ಟದಂತೆ ವರದಿ ಬರೆಸಿಕೊಳ್ಳಲು ರಾಜ್ಯ ಸರಕಾರ ನಿವೃತ್ತ ನ್ಯಾಯಾಧೀಶ ಸುಭಾಷ್ ಅಡಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆ ಮಾಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಪ್ರಬಲವಾಗಿರುವ ಸಮುದಾಯಗಳನ್ನು ಹಿಂದುಳಿದ ವರ್ಗಗಳ 2ಎ ಮೀಸಲಾತಿ ಪಟ್ಟಿಗೆ ಸೇರಿಸಬಾರದೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಬುಧವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹವನ್ನುದ್ದೇಶಿಸಿ ಅವರು ಮಾತನಾಡಿದರು.
ಶೋಷಿತರಿಗೆ ಮೀಸಲಾತಿ ದೊರೆಯಬೇಕೆಂಬ ಉದ್ದೇಶ ನನಗೂ ಇದೆ. ಜತೆಗೆ, ಮೀಸಲಾತಿ ಸೇರ್ಪಡೆಗೆ ಆಗಲಿ ಅಥವಾ ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನ ಬದ್ಧವಾದ ಅಸ್ತಿತ್ವವೂ ಇದೆ. ಹೀಗಿರುವಾಗ, ರಾಜ್ಯ ಸರಕಾರ ನಿವೃತ್ತ ನ್ಯಾಯಾಧೀಶ ಸುಭಾಷ್ ಅಡಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವ ಅಗತ್ಯತೆ ಏನಿತ್ತು. ತಮ್ಮ ಇಷ್ಟದಂತೆ ವರದಿ ಬರೆಸಿಕೊಳ್ಳಲಿಕ್ಕಾ? ಹಾಗಾದರೆ, ಆಯೋಗದ ಅಧ್ಯಕ್ಷರಿಗೆ ಏನು ಕೆಲಸ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಮತ್ತು ಆರೆಸ್ಸೆಸ್ ಈ ಹಿಂದಿನಿಂದಲೂ ಮೀಸಲಾತಿ ವಿರೋಧಿಗಳು. ಇದೀಗ ರಾಜಕೀಯ ಲಾಭಕ್ಕಾಗಿ ಮೀಸಲಾತಿ ಕುರಿತು ಸಮುದಾಯಗಳನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದ ಅವರು, ವಿದ್ಯಾಸಿರಿ ಸೇರಿದಂತೆ ಹಲವು ಯೋಜನೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೈಬಿಟ್ಟಿದ್ದಾರೆ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜನಾಂಗದ ಅಭಿವೃದ್ಧಿ ನಿಗಮಗಳಲ್ಲೂ ತಾರತಮ್ಯ ಮಾಡಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ನಿಗಮ ಮಂಡಳಿಗೆ ತಲಾ 500 ಕೋಟಿ ನೀಡಿದರೆ, ಇನ್ನುಳಿದ 14 ಸಮುದಾಯಗಳ ನಿಗಮಗಳಿಗೆ ಒಟ್ಟುಗೂಡಿಸಿ 500 ಕೋಟಿ ರೂ., ಕೊಟ್ಟಿದ್ದಾರೆ. ಇದು ಹಿಂದುಳಿದ ಜಾತಿಗಳಿಗೆ ಮಾಡಿರುವ ದ್ರೋಹ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎಚ್.ಎಂ.ರೇವಣ್ಣ, ನಸೀರ್ ಅಹ್ಮದ್, ಶಾಸಕ ಬಿ.ಸುರೇಶ್, ಒಕ್ಕೂಟದ ಅಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ಸುರೇಶ್ ಎಂ.ಲಾತೂರ್, ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ಆರ್.ವೆಂಕಟರಾಮಯ್ಯ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಬಿಎಸ್ಸೈ ಹಿಂದುಳಿದ ವರ್ಗಗಳ ವಿರೋಧಿ
ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅತಿ ಕಡಿಮೆ ಅನುದಾನ ನೀಡಿದ್ದಾರೆ. ಇದರಿಂದಲೇ ಅವರು ಹಿಂದುಳಿದ ವರ್ಗಗಳ ವಿರೋಧಿ ಎಂದು ಗೊತ್ತಾಗುತ್ತದೆ. ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿದ್ದೇನೆ, ಆದರೆ ಇದುವರೆಗೂ ಉತ್ತರ ನೀಡಿಲ್ಲ, ಅವರು ಉತ್ತರಿಸುತ್ತಾರೆ ಎನ್ನುವ ನಂಬಿಕೆಯೂ ಇಲ್ಲ. ಅಲ್ಲದೆ, ಎಲ್ಲ ನಿಗಮಗಳಿಗೆ ಜನಸಂಖ್ಯೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕು.
-ಸಿದ್ದರಾಮಯ್ಯ, ವಿಪಕ್ಷ ನಾಯಕ







