ರಾಜಸ್ಥಾನದ ಕಾರಾಗೃಹದಲ್ಲಿ ಹಿಂದುಳಿದ ಜಾತಿಯ ಕೈದಿಗಳು ಅಡುಗೆ ಮಾಡುವುದಕ್ಕೆ ನಿಷೇಧ ವಿಧಿಸುವ ಕಾಯ್ದೆಗೆ ತಿದ್ದುಪಡಿ

ಭುವನೇಶ್ವರ, ಮಾ. 17: ರಾಜಸ್ಥಾನದ ಕಾರಾಗೃಹದಲ್ಲಿ ಹಿಂದುಳಿದ ಜಾತಿಗಳ ಕೈದಿಗಳು ಅಡುಗೆ ಕೆಲಸ ನಿರ್ವಹಿಸುವುದನ್ನು ನಿಷೇಧಿಸುವ 120 ವರ್ಷ ಹಳೆಯ ಕಾಯ್ದೆಗೆ ಕೊನೆಗೂ ತಿದ್ದುಪಡಿ ತರಲಾಗಿದೆ ಎಂದು ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಾಗೃಹದಲ್ಲಿ ಅಡುಗೆ ಮಾಡುವುದು ಹಾಗೂ ಸ್ವಚ್ಛಗೊಳಿಸುವಂತಹ ಕಾರ್ಯಗಳಿಗೆ ನಿಯೋಜಿಸುವ ಸಂದರ್ಭ ಜಾತಿಯ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯ ಎಸಗುವ ಈ ಕಾಯ್ದೆಯನ್ನು 120 ವರ್ಷಗಳ ಹಿಂದೆ ಬ್ರಿಟೀಷ್ ಆಡಳಿತದ ಸಂದರ್ಭ ರೂಪಿಸಲಾಗಿತ್ತು.
ರಾಜಸ್ಥಾನ ಕಾರಾಗೃಹದ ಪ್ರಧಾನ ನಿರ್ದೇಶಕ (ಡಿಜಿ) ರಾಜೀವ್ ದಾಸೋಟ್ ಈ ಕಾಯ್ದೆಗೆ ತಿದ್ದುಪಡಿ ತರುವಂತೆ ಈ ವರ್ಷ ಜನವರಿಯಲ್ಲಿ ಬಲವಾಗಿ ಪ್ರತಿಪಾದಿಸಿದ್ದರು ಹಾಗೂ ಫೆಬ್ರವರಿಯಲ್ಲಿ ತಿದ್ದುಪಡಿ ತರುವಂತೆ ನೋಡಿಕೊಂಡರು.
‘‘ಭಾರತ ಸ್ವಾತಂತ್ರ ಗಳಿಸಿದ ಹಾಗೂ ನೂತನ ಕಾಯ್ದೆಗಳನ್ನು ಜಾರಿಗೆ ತಂದ ಹೊರತಾಗಿಯೂ ಕಾರಾಗೃಹ ಕಾಯ್ದೆ 1984 (1894ರ ಕೇಂದ್ರ ಕಾಯ್ದೆ ನಂ. 9) ಅಡಿಯಲ್ಲಿ ರೂಪಿಸಲಾದ ರಾಜಸ್ಥಾನದ ಕಾರಾಗೃಹ ಕಾಯ್ದೆ 1951ರ ಅಡಿಯಲ್ಲಿ ಜಾತಿ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯವನ್ನು ಅನುಸರಿಸುವುದು ಮುಂದುವರಿದಿತ್ತ್ತು’’ ಎಂದು ದಾಸೋಟ್ ಹೇಳಿದ್ದಾರೆ.
ಕಾರಾಗೃಹದಲ್ಲಿ ಬ್ರಾಹ್ಮಣರು ಅಥವಾ ಉತ್ತಮ ಜಾತಿ ಹಿಂದೂ ಕೈದಿಗಳು ಮಾತ್ರ ಅಡುಗೆ ಮಾಡಬೇಕು. ಸ್ವಚ್ಛಗೊಳಿಸುವ ಕೆಲಸವನ್ನು ಕೆಳಗಿನ ಜಾತಿಯ ಕೈದಿಗಳಿಗೆ ವಹಿಸಿಕೊಡಬೇಕು ಎಂದು ಈ ಕಾಯ್ದೆ ಸ್ಪಷ್ಟವಾಗಿ ಹೇಳುತ್ತದೆ.
ದೇಶ ಸ್ವತಂತ್ರ ಹೊಂದಿ ಹೊಸ ಕಾನೂನು ರಚನೆಯಾದ ಬಳಿಕವೂ ಈ ತಾರತಮ್ಯ ಮುಂದಿರುವುದು ಅಚ್ಚರಿಯ ವಿಚಾರ. ಸರಕಾರೇತರ ಸಂಸ್ಥೆಗಳು ಹಾಗೂ ಉಚ್ಚ ನ್ಯಾಯಾಲಯ ಈ ತಾರತಮ್ಯವನ್ನು ತನ್ನ ಗಮನಕ್ಕೆ ತಂದಿತು. ತಾನು ಕೂಡಲೇ ಈ ಕಾಯ್ದೆಯ ತಿದ್ದುಪಡಿಗೆ ಪ್ರಸ್ತಾವಿಸಲು ನಿರ್ಧರಿಸಿದೆ ಎಂದು ದಾಸೋಟ್ ಹೇಳಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದರು ಹಾಗೂ ಕಾಯ್ದೆಗೆ 20 ದಿನಗಳ ಒಳಗೆ ತಿದ್ದುಪಡಿಗೆ ನೆರವು ನೀಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು ಎಂದು ದಾಸೋಟ್ ಹೇಳಿದರು.
ಈ ವರ್ಷ ಪೆಬ್ರವರಿ 12ರಂದು ಸರಕಾರ ರಾಜಸ್ಥಾನ ಕಾರಾಗೃಹ ಕಾಯ್ದೆ-1951ಕ್ಕೆ ತಿದ್ದುಪಡಿ ತಂದಿತು ಹಾಗೂ ಅದನ್ನು ರಾಜಸ್ಥಾನ ಕಾರಾಗೃಹ (ತಿದ್ದುಪಡಿ)ಕಾಯ್ದೆ-2021 ಎಂದು ಬದಲಾಯಿಸಿತು.







