ಕಾಡುಪ್ರಾಣಿ ಹಾವಳಿ ತಪ್ಪಿಸಿ, ಇಲ್ಲವೇ ಕೊಲ್ಲಲು ನಮಗೆ ಅವಕಾಶ ಕೊಡಿ: ಸದನದಲ್ಲಿ ಶಾಸಕರ ಆಗ್ರಹ

ಬೆಂಗಳೂರು, ಮಾ. 18: ಮಂಗಗಳು, ಜಿಂಕೆಗಳು, ಹಂದಿಗಳು ಸೇರಿದಂತೆ ಕಾಡುಪ್ರಾಣಿಗಳ ಹಾವಳಿಯಿಂದ ಆಗುವ ಬೆಳೆಹಾನಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಿ ಹೆಚ್ಚಿನ ಮೊತ್ತ ನೀಡಬೇಕು ಹಾಗೂ ಮಂಕಿ ಪಾರ್ಕ್ ಸ್ಥಾಪನೆ ಮಾಡಬೇಕೆಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಅರಗ ಜ್ಞಾನೇಂದ್ರ, ಮಲೆನಾಡು, ಪಶ್ಚಿಮಘಟ್ಟ, ಬಯಲುಸೀಮೆ ಸೇರಿದಂತೆ ರಾಜ್ಯದಲ್ಲಿ ಕಾಡು ಪ್ರಾಣಿಗಳು ಮತ್ತು ಮಂಗಗಳ ಹಾವಳಿ ಸಾಮಾನ್ಯ. ಬಿತ್ತನೆ ಮಾಡಿದ ಬೀಜ ಹಾಗೂ ಬೆಳೆದು ನಿಂತ ಪೈರನ್ನು ನಾಶ ಮಾಡುತ್ತಿವೆ. ಕೆಲವು ಕಡೆ ವನ್ಯಜೀವಿ ಮತ್ತು ಮಾನವ ಸಂಘರ್ಷವೂ ಉಂಟಾಗಿದೆ. ಸರಕಾರ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ ಗಮನ ಸೆಳೆದರು.
ನನ್ನ ಕ್ಷೇತ್ರದಲ್ಲಿ ಕಾಡಾನೆ, ಕಾಡುಕೋಣ, ಕಾಡುಹಂದಿ ಮತ್ತು ಮಂಗಗಳ ಮಿತಿ ಮೀರಿದೆ. ಹೀಗಾಗಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಬೆಳೆಹಾನಿಗೆ ನೀಡುವ ಪರಿಹಾರ ಮೊತ್ತವನ್ನು ಪರಿಷ್ಕರಿಸಬೇಕು ಎಂದರು. ಇದಕ್ಕೆ ಬಿಜೆಪಿಯ ಕಳಸಪ್ಪ ಬಂಡಿ, ಕೆ.ಜಿ.ಬೋಪಯ್ಯ, ಜೆಡಿಎಸ್‍ನ ಎಚ್.ಕೆ.ಕುಮಾರಸ್ವಾಮಿ, ಶ್ರೀನಿವಾಸಗೌಡ ಧ್ವನಿಗೂಡಿಸಿದರು.
ಮಂಕಿ ಪಾರ್ಕ್ ಎಲ್ಲಿ: ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮಂಕಿಪಾರ್ಕ್ ನಿರ್ಮಿಸಲು 6 ಕೋಟಿ ರೂ.ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ, ಇದುವರೆಗೂ ಮಂಕಿ ಪಾರ್ಕ್ ನಿರ್ಮಾಣವಾಗಲಿಲ್ಲ, ನಮಗೆ ಮಂಗಗಳ ಕಾಟವೂ ತಪ್ಪಿಲ್ಲ. ಒಂದು ಎಕರೆ ಬೆಳೆ ಹಾನಿಯಾದರೆ ಅವರು ಪರಿಹಾರ ತೆಗೆದುಕೊಳ್ಳಲು ಇಲಾಖೆಯಿಂದ ಇಲಾಖೆಗೆ ಅಲೆಯಬೇಕು ಎಂದು ಅರಗ ಜ್ಞಾನೇಂದ್ರ ತಿಳಿಸಿದರು.
ಮಂಗಗಳ ಹಾವಳಿ ನಿಯಂತ್ರಿಸಲು ಅವುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡುತ್ತೇವೆಂದು ಹೇಳುತ್ತೀರಿ. ನೀವು ಗಂಡು ಮಂಗನಿಗೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದೀರೋ ಅಥವಾ ಹೆಣ್ಣು ಮಂಗಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದಿರೋ ಎಂದು ಪ್ರಶ್ನಿಸಿದ ಅವರು, ನೀವು ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ. ಇಲ್ಲವೇ ಅವುಗಳನ್ನು ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಆಗ್ರಹಿಸಿದರು.
ಕೆ.ಜಿ.ಬೋಪಯ್ಯ ಮಾತನಾಡಿ, ನನ್ನ ಕ್ಷೇತ್ರದಲ್ಲಿ ಹುಲಿಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಮೂರು ಮಂದಿಯನ್ನು ಕೊಂದು ಹಾಕಿದೆ. ಹುಲಿ ಕೊಲ್ಲಲು ನಮಗೆ ಅವಕಾಶ ಕೊಡಿ ಎಂದು ಕೇಳಿದ್ದಕ್ಕೆ, ನಮ್ಮ ವಿರುದ್ಧ ಪರಿಸರವಾದಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸರಕಾರ ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಬಳಿಕ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಪರವಾಗಿ ಉತ್ತರ ನೀಡಿದ ಸಚಿವ ಜಗದೀಶ್ ಶೆಟ್ಟರ್, ಕಾಡು ಪ್ರಾಣಿಗಳಿಂದ ರೈತರು ಬೆಳೆದ ಬೆಳೆ ಹಾನಿಯಾಗುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ. ಬೆಳೆ ಹಾನಿ ಪರಿಹಾರವನ್ನು ಪರಿಷ್ಕರಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಕೆಲವು ಭಾಗಗಳಲ್ಲಿ ಹೆಚ್ಚಿನ ಪರಿಹಾರ ಕೊಡಬೇಕೆಂಬ ಬೇಡಿಕೆ ಇದೆ. ಇವೆಲ್ಲವನ್ನು ಅರಣ್ಯ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗದಗ ಮತ್ತು ಕೊಪ್ಪಳ ಸೇರಿದಂತೆ ಜಿಂಕೆಗಳ ಸಂತತಿ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಲ್ಲಿ ಸರಕಾರ ಈ ಹಿಂದೆ ಘೋಷಣೆ ಮಾಡಿರುವ ಜಿಂಕೆ ಪಾರ್ಕ್ ಸ್ಥಾಪಿಸಲು ಪರಿಶೀಲನೆ ನಡೆಸಲಾಗುವುದು. ಮಂಗಗಳು, ಜಿಂಕೆಗಳು, ಕಾಡುಹಂದಿ ಸೇರಿದಂತೆ ವನ್ಯಪ್ರಾಣಿಗಳ ಉಪಟಳ ತಡೆಗೆ ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶೆಟ್ಟರ್ ತಿಳಿಸಿದರು.







