ಉಡುಪಿ: ಎಲ್ಲೈಸಿ ಖಾಸಗೀಕರಣ ಪ್ರಯತ್ನದ ವಿರುದ್ಧ ವಿಮಾ ನೌಕರರ ಮುಷ್ಕರ

ಉಡುಪಿ, ಮಾ.18: ಭಾರತೀಯ ಜೀವವಿಮಾ ನಿಗಮದ ಶೇರು ವಿಕ್ರಯ, ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳದ ಮಿತಿಯನ್ನು ಈಗಿನ ಶೇ.49ರಿಂದ ಶೇ.74ಕ್ಕೆ ಏರಿಸುವ ಪ್ರಸ್ತಾಪ, ಒಂದು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಸಂಸ್ಥೆ ಹಾಗೂ ಎರಡು ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವನ್ನು ವಿರೋಧಿಸಿ ರಾಷ್ಟ್ರ ವ್ಯಾಪಿ ಕರೆ ನೀಡಿರುವ ಒಂದು ದಿನದ ಮುಷ್ಕರವನ್ನು ಇಂದು ಉಡುಪಿಯ ಅಜ್ಜರಕಾಡಿನಲ್ಲಿರುವ ಎಲ್ಲೈಸಿ ವಿಭಾಗೀಯ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಕೇಂದ್ರ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಈ ಬಾರಿಯ ಬಜೆಟ್ ಮಂಡನೆಯ ಭಾಷಣದಲ್ಲಿ ಈ ಎಲ್ಲಾ ಮಹತ್ವದ ಘೋಷಣೆಗಳನ್ನು ಮಾಡಿದ್ದು, ಈ ವಿತ್ತೀಯ ವರ್ಷದಲ್ಲಿ ಎಲ್ಲೈಸಿ ಶೇರು ವಿಕ್ರಯವನ್ನು ಕಾರ್ಯರೂಪಕ್ಕೆ ತರುವ ಸೂಚನೆಗಳನ್ನು ನೀಡಿದ್ದಾರೆ ಎಂದು ಉಡುಪಿ ವಿಭಾಗ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ತಿಳಿಸಿದರು.
ಈ ಮೂರೂ ಪ್ರಸ್ತಾಪಗಳು ವಿಮಾ ಉದ್ದಿಮೆಯ, ದೇಶದ ಆರ್ಥಿಕತೆಯ ಹಾಗೂ ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಅಖಿಲ ಬಾರತ ವಿಮಾ ನೌಕರರ ಸಂಘ ಹಾಗೂ ಇತರೆ ಕಾರ್ಮಿಕ ಸಂಘಟನೆಗಳು ಇವುಗಳನ್ನು ವಿರೋಧಿಸಿ ಒಂದು ದಿನದ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಎಲ್ಲೈಸಿಯಲ್ಲಿ ದುಡಿಯುತ್ತಿರುವ ಸಮಸ್ತ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು ಹಾಗೂ ನೌಕರರು ಈ ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ದೇಶದಲ್ಲಿ ಒಟ್ಟು 348 ಸಾರ್ವಜನಿಕ ಕ್ಷೇತ್ರದ ಸಂಸ್ಥೆಗಳಿವೆ. ಇವುಗಳಲ್ಲಿ 186 ಸಂಸ್ಥೆಗಳು ಲಾಭದಾಯಕವಾಗಿ ನಡೆಯುತ್ತಿವೆ. ಅವುಗಳ ಒಟ್ಟು ಬಂಡವಾಳ 25 ಲಕ್ಷ ಕೋಟಿ ರೂ.ಗಳಾದರೆ, ಅವು ಪ್ರತಿ ವರ್ಷ ಒಂದು ಲಕ್ಷ ಕೋಟಿ ರೂ. ಆದಾಯವನ್ನು ನೀಡುತ್ತಿವೆ. 1956ರಲ್ಲಿ 5 ಕೋಟಿ ರೂ. ಬಂಡವಾಳದೊಂದಿಗೆ ಪ್ರಾರಂಭಗೊಂಡ ಎಲ್ಲೈಸಿಯ ಇಂದಿನ ಆಸ್ತಿ ಮೌಲ್ಯ 35 ಲಕ್ಷ ಕೋಟಿ ರೂ.ಗಳಾಗಿವೆ ಎಂದು ಪ್ರಭಾಕರ ಕುಂದರ್ ವಿವರಿಸಿದರು.
ಇಂದು ಎಲ್ಲೈಸಿಯಲ್ಲಿ 30 ಕೋಟಿ ವೈಯಕ್ತಿಕ ಪಾಲಿಸಿದಾರರು ಹಾಗೂ 12 ಕೋಟಿಯಷ್ಟು ಗುಂಪು ವಿಮಾ ಪಾಲಿಸಿದಾರರಿದ್ದಾರೆ. ಸಂಸ್ಥೆ ಈವರೆಗೆ ಸರಕಾರಕ್ಕೆ ನೀಡಿರುವ ಲಾಭಾಂಶದ ಒಟ್ಟು ಮೊತ್ತ 28,000 ಕೋಟಿ ರೂ.ಗಳಾದರೆ, ಕಳೆದ ವರ್ಷ ನೀಡಿರುವ ಲಾಭಾಂಶ 2698 ಕೋಟಿ ರೂ. ಇದು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಜನಸಮುದಾಯಕ್ಕೆ ಆದ್ಯತೆಯನ್ನು ನೀಡುತ್ತಾ ಬಂದಿದೆ. ಅಲ್ಲದೇ ತನ್ನ ಪಾಲಿಸಿದಾರರಿಗೆ ಒಳ್ಳೆಯ ಭದ್ರತೆಯನ್ನು ಒದಗಿಸುತ್ತಿದೆ ಎಂದವರು ನುಡಿದರು.
ಎಲ್ಲೈಸಿಯ ಶೇರು ವಿಕ್ರಯ, ದೇಶದ ಆರ್ಥಿಕತೆ ಮೇಲೆ ಹಾಗೂ ದೇಶದ ಜನಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ರಾಷ್ಟ್ರೀಕರಣದ ಮೂಲ ಉದ್ದೇಶಗಳಿಗೆ ಕೊಡಲಿಯೇಟು ನೀಡಲಿದೆ. ಇದು ಖಾಸಗೀಕರಣಗೊಂಡರೆ ಲಾಭಾಂಶವನ್ನು ಪಾಲಿಸಿದಾರರಿಗೆ ನೀಡದೇ, ಶೇರುದಾರರಿಗೆ ಹೆಚ್ಚಿನ ಲಾಭಾಂಶ ನೀಡಲಿದೆ ಎಂದು ಪ್ರಭಾಕರ ಕುಂದರ್ ಎಚ್ಚರಿಸಿದರು.
ದೇಶದಲ್ಲಿಂದು ಹಳ್ಳಿಯ ಮೂಲೆ ಮೂಲೆಯ ಜನರು ಸೇರಿದಂತೆ ಒಟ್ಟು 40 ಕೋಟಿ ವಿಮಾ ಪಾಲಿಸಿದಾರರಿದ್ದು, ಇದನ್ನು 60 ಕೋಟಿ ಜನಸಂಖ್ಯೆಗೆ ವಿಸ್ತರಿಸುವ ಅವಕಾಶವಿದೆ. ಆದರೆ ಖಾಸಗೀಕರಣದಿಂದ ಗ್ರಾಮೀಣ ವಲಯಗಳಿಗೆ ವಿಮೆ ವಿಸ್ತರಿಸುವ ಉದ್ದೇಶಕ್ಕೆ ತೀವ್ರ ಹಿನ್ನಡೆಯಾಗಲಿದೆ. ಸಮಾಜದ ಬಡ, ಕೆಳಮಧ್ಯಮ ವರ್ಗ, ಆರ್ಥಿಕ ದುರ್ಬಲ ವರ್ಗದವರಿಗೆ ವಿಮಾ ಸೌಲಭ್ಯಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದರು.
ಸಂಘದ ಉಪಾಧ್ಯಕ್ಷ ಡೆರಿಕ್ ಎ.ರೆಬೆಲ್ಲೋ ಮಾತನಾಡಿ, ಕೇಂದ್ರ ಸರಕಾರ ಐಪಿಓಗೆ ಅನುಮತಿ ನೀಡುವ ಮೂಲಕ ಎಲ್ಲೈಸಿ ಖಾಸಗೀಕರಣಕ್ಕೆ ಮೊದಲ ಹೆಜ್ಜೆ ಇಡುತ್ತಿದೆ. ಇದಕ್ಕಾಗಿ ಎಲ್ಲೈಸಿ ಕಾಯ್ದೆಗೆ ತಿದ್ದುಪಡಿಯನ್ನೂ ಮಾಡಲಾಗುತ್ತಿದೆ. ಇವುಗಳನ್ನು ನಾವು ತೀವ್ರವಾಗಿ ವಿರೋಧಿಸುತಿದ್ದೇವೆ. ಅಲ್ಲದೇ ಕಳೆದ 43 ತಿಂಗಳಿನಿಂದ ನಮ್ಮ ವೇತನದಲ್ಲಿ ಪರಿಷ್ಕರಣೆ ಮಾಡಿಲ್ಲ. ಬಹುಕಾಲದಿಂದ ಬಾಕಿ ಇರುವ ವೇತನ ಪರಿಷ್ಕರಣೆಯನ್ನು ಕೂಡಲೇ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಸಾರ್ವಜನಿಕರ ವಲಯದ ವಿಮಾ ಸಂಸ್ಥೆ ಹಾಗೂ ಬ್ಯಾಂಕ್‌ಗಳು ಸಾರ್ವಜನಿಕ ಕ್ಷೇತ್ರದಲ್ಲಿ ಇರಬೇಕು. ಹಾಗಿದ್ದರೆ ಮಾತ್ರ ಅವುಗಳ ಪ್ರಯೋಜನ ದೇಶದ ಜನಸಾಮಾನ್ಯರಿಗೆ ದೊರೆಯುತ್ತದೆ. ಒಮ್ಮೆ ಅದು ಖಾಸಗಿ ವಶಕ್ಕೆ ಹೋದರೆ ಮತ್ತೆ ಯಾವುದೂ ಜನಸಾಮಾನ್ಯರ ಹಂಗಿನಲ್ಲಿರುವುದಿಲ್ಲ ಎಂದು ರೆಬೆಲ್ಲೊ ನುಡಿದರು.
ಉಡುಪಿ ವಿಭಾಗ ಎಲ್ಲೈಸಿ ಅಧಿಕಾರಿಗಳ ಸಂಘದ ಪ್ರದಾನ ಕಾರ್ಯದರ್ಶಿ ಕುಶಾಲ್ ಕುಮಾರ್ ಎ. ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಬಾಬು ನಾಯ್ಕ, ಉಡುಪಿ ವಿಭಾಗ ವಿಮಾ ನೌಕರರ ಸಂಘದ ಅಧ್ಯಕ್ಷ ವಿಶ್ವನಾಥ ಕೆ., ಮಹಿಳಾ ಉಪಸಮಿತಿ ಸಂಚಾಲಕಿ ನಿರ್ಮಲ, ಅಭಿವೃದ್ಧಿ ಅಧಿಕಾರಿಗಳ ಸಂಘದ ದೇವಪ್ಪ ನಾಯಕ್ ಮುಂತಾದವರು ಉಪಸ್ಥಿತರಿದ್ದರು.









