ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಭೂಮಿ ಖರೀದಿಸುವಲ್ಲಿ ನಿರ್ಲಕ್ಷ್ಯ: ಪಿಡಿಒಗಳ ವಿರುದ್ಧ ಜಿಪಂ ಸಿಇಒ ಕೆಂಡಾಮಂಡಲ

ಮಂಗಳೂರು, ಮಾ.18: ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ನಿರ್ಲಕ್ಷ್ಯ ವಹಿಸಿರುವುದಕ್ಕೆ ದ.ಕ. ಜಿಪಂ ಸಿಇಒ ಡಾ.ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳೂರು ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ 20 ದಿನಗಳ ಒಳಗೆ ಮಂಗಳೂರು ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಜಾಗ ಅಂತಿಮಗೊಳಿಸದಿದ್ದರೆ ಸಂಬಂಧಪಟ್ಟ ಪಿಡಿಒಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪಿಡಿಒಗಳು ಕೆಲಸ ಮಾಡದೇ ಬೇರೆಯವರನ್ನು ದೂರುವಂತಿಲ್ಲ. ಘನತ್ಯಾಜ್ಯ ಘಟಕಕ್ಕೆ ಆರೋಗ್ಯ ಇಲಾಖೆಯ ಎನ್‌ಒಸಿ ಬೇಕಿಲ್ಲ. ಜನರ ಆಕ್ಷೇಪವಿದ್ದರೆ ಅರಿವು ಮೂಡಿಸಬೇಕು. ಭೂಮಿ ಇಲ್ಲದಿದ್ದರೆ ಪಕ್ಕದ ಗ್ರಾಪಂ ಜತೆ ಒಪ್ಪಂದ ಮಾಡಿಕೊಳ್ಳಿ. ಕನಿಷ್ಠ 20 ದಿನ, ಗರಿಷ್ಠ 30 ದಿನ ಸಮಯ ನೀಡುತ್ತೇನೆ. ಅಷ್ಟರೊಳಗೆ ಎಲ್ಲ ಗ್ರಾಪಂಗಳು ಜಾಗ ಅಂತಿಮಗೊಳಿಸಿ ಮುಂದಿನ ಪ್ರಕ್ರಿಯೆ ನಡೆಸಬೇಕು ಎಂದು ಸೂಚಿಸಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಎರಡನೇ ಹಂತದ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವಲ್ಲಿ ಪಿಡಿಒಗಳು ಆಲಸ್ಯತನ ವರ್ತನೆ ತೋರಿದ್ದಾರೆ. 42 ಗ್ರಾಪಂಗಳ ಪೈಕಿ 32 ಕಡೆ ಭೂಮಿ ಅಂತಿಮಗೊಂಡಿಲ್ಲ. ಇದಕ್ಕೆ ಸಂಬಂಧಿಸಿದ ಕಡತ ತಾಲೂಕು ಕಚೇರಿ, ಸರ್ವೆ ಇಲಾಖೆ, ವಿಎ, ಎಸಿ, ಡಿಸಿ ಬಳಿ ಬಾಕಿಯಾಗಿದೆ ಎಂದು ಪಿಡಿಒಗಳು ಹೇಳುವಂತಿಲ್ಲ. ಈ ಸಂಬಂಧ ಕಂದಾಯ ಇಲಾಖೆಯನ್ನು ದೂರಿ ಪ್ರಯೋಜನವಿಲ್ಲ ಎಂದರು.
ಬೆರಳೆಣಿಕೆಯ ಗ್ರಾಪಂನ ಪಿಡಿಒಗಳನ್ನು ಹೊರತುಪಡಿಸಿದರೆ ಇನ್ನುಳಿದವರ ಸಾಧನೆ ಶೂನ್ಯ. ಬಹುತೇಕ ಪಿಡಿಒಗಳು ಭೂಮಿ ಖರೀದಿಸುವಲ್ಲಿ ನಿರಾಸಕ್ತಿ ಹೊಂದಿದ್ದಾರೆ. ಕೆಲವರು ಭೂಮಿ ಖರೀದಿಸಿದರೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರೆಕಾರ್ಡ್‌ನಲ್ಲಿ ನಮೂದಿಸಿಲ್ಲ. ಇನ್ನು ಕೆಲವರು ಗ್ರಾಪಂನಲ್ಲಿ ವ್ಯಕ್ತವಾದ ಆಕ್ಷೇಪಣೆಗೆ ವೌನ ವಹಿಸಿ ಕೆಲಸ ಸ್ಥಗಿತಗೊಳಿಸಿರುವುದು ಕೂಡ ಸಲ್ಲದು ಎಂದರು.
ಭೂಮಿ ಖರೀದಿಸುವ ಸಂದರ್ಭ ಸ್ಥಳೀಯರಿಂದ ಆಕ್ಷೇಪಣೆ ವ್ಯಕ್ತವಾದಾಗ ಅವರಿಗೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡಬೇಕು. 200 ಮೀಟರ್ ಒಳಗೆ ಯಾವುದೇ ಮನೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಕೆಲಸವನ್ನು ಮುಂದುವರಿಸಬೇಕು ಎಂದು ಸಿಇಒ ಹೇಳಿದರು.
25 ನಿವೇಶನಕ್ಕೆ ಎಕರೆ ಭೂಮಿ: ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ವಸತಿ ರಹಿತರ ಪಟ್ಟಿಯನ್ನು ರಚಿಸಬೇಕು. ಪಟ್ಟಿ ಅಂತಿಮಗೊಂಡ ನಂತರ ಸರಕಾರದ ವೆಬ್‌ಸೈಟ್‌ಗೆ ಮಾಹಿತಿಯನ್ನು ಅಪ್‌ಲೋಡ್ ಮಾಡಬೇಕು. 25 ನಿವೇಶನಗಳಿಗೆ ಒಂದು ಎಕರೆ ಜಾಗದ ಅಗತ್ಯ ಇರುತ್ತದೆ. ಗ್ರಾಪಂನಲ್ಲಿ 50 ವಸತಿ ರಹಿತರು ಇದ್ದರೆ ಅಂತಹ ಪಿಡಿಒಗಳು ಎರಡು ಎಕರೆ ಜಾಗ ಖರೀದಿಸಬೇಕು. ಪಿಡಿಒಗಳು ಮುತುವರ್ಜಿ ವಹಿಸಿ ಈ ಕೆಲಸ ಮಾಡಬೇಕು. ಮೈಗಳ್ಳತನವನ್ನು ಅಧಿಕಾರಿಗಳು ಬಿಡಬೇಕು. ಸ್ಥಳಕ್ಕೆ ತೆರಳಿ ಕರ್ತವ್ಯ ನಿರ್ವಹಿಸಬೇಕು. ಕಾರಣ ಹೇಳಿ ನುಣುಚಿಕೊಳ್ಳುವಂತಿಲ್ಲ ಎಂದೂ ಹೇಳಿದರು.
74ರ ಪೈಕಿ 6 ಕಾಮಗಾರಿ ಪೂರ್ಣ: ಜಲಜೀವನ್ ಮಿಷನ್ ಯೋಜನೆಯಡಿ 74 ಕಾಮಗಾರಿ ಪೈಕಿ ಕೇವಲ ಆರು ಕಾಮಗಾರಿಗಳ ಟೆಂಡರ್ ಅಂತಿಮಗೊಂಡಿದೆ ಎಂದು ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಹಿತಿ ನೀಡಿದರು. ಉಳಿದ ಕಾಮಗಾರಿ ಯಾವ ಹಂತದಲ್ಲಿದೆ ಎಂದು ಸಿಇಒ ಪ್ರಶ್ನಿಸಿದಾಗ ಎಇಇ ನಿರುತ್ತರರಾದರು.
ಈ ಬಗ್ಗೆ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರನ್ನು ತರಾಟೆಗೆತ್ತಿಕೊಂಡ ಸಿಇಒ ಕುಮಾರ್, ನಿಮ್ಮ ವ್ಯಾಪ್ತಿಯ ಕೆಲಸದ ಬಗ್ಗೆ ನಿಮಗೇ ಮಾಹಿತಿ ಇಲ್ಲ ಎಂದರೆ ಹೇಗೆ? ಸಭೆಗೆ ಆಗಮಿಸುವಾಗ ಪೂರಕ ಮಾಹಿತಿ ಹೊಂದಿರಬೇಕು ಎಂಬ ಜ್ಞಾನವೂ ಇಲ್ಲವೇ ಎಂದು ಆಕ್ಷೇಪಿಸಿದರು. ಜೆಜೆಎಂ ಯೋಜನೆಗೆ ಪಂಚಾಯತ್ ಮತ್ತು ಸಮುದಾಯದ ಕೊಡುಗೆಯನ್ನು ಸಮರ್ಪಕವಾಗಿ ಪಡೆದು ಯೋಜನೆ ಕಾರ್ಯಗತಗೊಳಿಸುವಂತೆ ಸೂಚಿಸಿದರು.
ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ತಾಪಂ ಇಒ ಎನ್.ಜಿ. ನಾಗರಾಜ್, ಇಂಜಿನಿಯರ್‌ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.








