ಸಮಗ್ರ ಮಾದಕ ವಸ್ತು ವಿರೋಧಿ ನೀತಿ ಜಾರಿ: ಗೃಹ ಸಚಿವ ಬೊಮ್ಮಾಯಿ

ಬೆಂಗಳೂರು, ಮಾ.18: ರಾಜ್ಯದಲ್ಲಿ ಮಾದಕ ಪದಾರ್ಥಗಳ ಪಿಡುಗು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಸಮಗ್ರ ಮಾದಕ ವಸ್ತು ವಿರೋಧಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗುರುವಾರ ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಕವಟಗಿಮಠ ಮಹಾಂತೇಶ ಮಲ್ಲಿಕಾರ್ಜುನ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಮಾದಕ ಪದಾರ್ಥಗಳ ನಿಯಂತ್ರಣಕ್ಕೆ ಪ್ರತಿ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ನಿಗ್ರಹ ದಳ ತೆರೆಯಲಾಗಿದೆ. ಮಾದಕ ವಸ್ತು ವಿರೋಧಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಗೋವಾ, ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾದಕ ವಸ್ತುಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇವಿಸುತ್ತಾರೆ. ಸ್ಲಂನಿಂದ ಹಿಡಿದು ದೊಡ್ಡ ಮಟ್ಟದವರೆಗೂ ಈ ದಂಧೆ ವ್ಯಾಪಿಸಿದೆ ಎಂದು ತಿಳಿಸಿದರು.
ಹುಕ್ಕಾ ಬಾರ್ ನಿಷೇಧ: ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ವ್ಯಾಪಿಸಿರುವ ಹುಕ್ಕಾ ಬಾರ್ ನಿಷೇಧಕ್ಕೆ ಸೂಚನೆ ನೀಡಲಾಗುವುದು. ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.







