ನಕಲಿ ಬ್ಯಾಂಕ್ ಸೀಲ್ ಬಳಸಿ ತೆರಿಗೆ ಹಣ ವಂಚನೆ ಆರೋಪ: ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ, ದಲ್ಲಾಳಿ ವಿರುದ್ಧ ದೂರು
ಚಿಕ್ಕಮಗಳೂರು, ಮಾ.18: ಬ್ಯಾಂಕ್ ನ ನಕಲಿ ಸೀಲ್ ಬಳಸಿಕೊಂಡು ನಗರಸಭೆ ಸಿಬ್ಬಂದಿ ಹಾಗೂ ದಲ್ಲಾಳಿ ತೆರಿಗೆ ಹಣವನ್ನು ನಗರಸಭೆ ಅಕೌಂಟ್ಗೆ ಜಮೆ ಮಾಡದೇ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ನಗರಸಭೆಯಲ್ಲಿ ಬಿಲ್ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ಯಾಮ್ ಹಾಗೂ ದಲ್ಲಾಳಿ ಕೇಶವ್ ಎಂಬವರು ಬ್ಯಾಂಕ್ ನ ನಕಲಿ ಸೀಲ್ ಬಳಸಿಕೊಂಡು ತೆರಿಗೆದಾರರ ಹಣವನ್ನು ಬ್ಯಾಂಕ್ ಗೆ ಜಮೆ ಮಾಡದೇ ವಂಚಿಸಿದ್ದು, ಪ್ರಕರಣ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸಾರ್ವಜನಿಕರು ನಗರಸಭೆಯ ಕಂದಾಯ ಸೇರಿದಂತೆ ಯಾವುದೇ ತೆರಿಗೆಯನ್ನು ಚಲನ್ ಮೂಲಕ ನಗರಸಭೆಯ ಬ್ಯಾಂಕ್ ಅಕೌಂಟ್ ಗೆ ಪಾವತಿ ಮಾಡಬೇಕು. ಆದರೆ ನಗರದ ಕೋಟೆ ಬಡಾವಣೆಯ ನಿವಾಸಿ ಯೋಗಿಶ್ ಎಂಬವರು ಆಸ್ತಿ ತೆರಿಗೆಯ ಹಣವನ್ನು ಚಲನ್ ಮೂಲಕ ಪಾವತಿಸದೇ ನಗರಸಭೆ ಬಿಲ್ ಕಲೆಕ್ಟರ್ ಶ್ಯಾಮ್ ರವರಿಗೆ ನೀಡಿದ್ದಾರೆ. ಆದರೆ ಸಿಬ್ಬಂದಿ ಶ್ಯಾಮ್ 10,300 ರೂ. ಹಣವನ್ನು ಯೋಗೀಶ್ ಅವರಿಂದ ಪಡೆದುಕೊಂಡು ಆ ಹಣವನ್ನು ಬ್ರೋಕರ್ ಕೇಶವ ಎಂಬಾತನ ಕೈಗೆ ನೀಡಿ ಬ್ಯಾಂಕಿಗೆ ಜಮಾ ಮಾಡಲು ಹೇಳಿದ್ದಾನೆ. ಆದರೆ ಬ್ರೋಕರ್ ಕೇಶವ ಈ ಹಣವನ್ನು ನಗರಸಭೆ ಬ್ಯಾಂಕ್ ಖಾತೆ ಇರುವ ಯೂನಿಯನ್ ಬ್ಯಾಂಕಿಗೆ ಜಮೆ ಮಾಡದೇ ಹಣ ಪಾವತಿ ಮಾಡಿರುವಂತೆ ಚಲನ್ ಗೆ ಯೂನಿಯನ್ ಬ್ಯಾಂಕಿಬ ನಕಲಿ ಸೀಲ್ ಮುದ್ರೆ ಒತ್ತಿ ಚಲನ್ ಅನ್ನು ಸಿಬ್ಬಂದಿ ಶ್ಯಾಮ್ ಗೆ ನೀಡಿ ವಂಚಿಸಿದ್ದಾನೆ. ಚಲನ್ ನಲ್ಲಿದ್ದ ಸೀಲ್ ನಕಲಿ ಎಂಬುದನ್ನು ಗಮನಿಸದ ಶ್ಯಾಮ್ ಹಣ ಜಮಾ ಆಗಿದೆ ಎಂದು ಭಾವಿಸಿ ಸುಮ್ಮನಾಗಿದ್ದ ಎಂದು ಹೇಳಿದರು.
ನಗರಸಭೆ ಬಜೆಟ್ ಹಿನ್ನೆಲೆಯಲ್ಲಿ ಬ್ಯಾಂಕಲ್ಲಿರುವ ಬಾಕಿ ಹಣದ ಪರಿಶೀಲನೆ ವೇಳೆ ಚಲನ್ ಮೂಲಕ ಪಾವತಿಯಾದ ಹಣ ಹಾಗೂ ಬ್ಯಾಂಕಲ್ಲಿರುವ ಹಣಕ್ಕೂ ತಾಳೆಯಾಗಿಲ್ಲ. ಈ ಬಗ್ಗೆ ಪರಿಶೀಲಿಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ನಗರ ಠಾಣೆಗೆ ಈ ಸಂಬಂದ ದೂರು ನೀಡಲಾಗಿದ್ದು, ನಗರಸಭೆಗೆ ವಂಚನೆ ಮಾಡಿರುವ ಆರೋಪದಡಿಯಲ್ಲಿ ಸಿಬ್ಬಂದಿ ಶ್ಯಾಮ್ ಹಾಗೂ ದಲ್ಲಾಳಿ ಕೇಶವ್ ಎಂಬಾತನನ್ನು ಪೊಲೀಸರು ವಿಚಾರಣೆಗೊಳಪಡಿಸಿ ತನಿಖೆ ಆರಂಭಿಸಿದ್ದಾರೆ ಎಂದರು.
ಸಾರ್ವಜನಿಕರು ಕಂದಾಯ, ತೆರಿಗೆ ಹಣವನ್ನು ಪಾವತಿಸುವ ವೇಳೆ ಮಧ್ಯವರ್ತಿಗಳು, ದಲ್ಲಾಳಿಗಳ ಮೂಲಕ ಪಾವತಿಸುವುದನ್ನು ರೂಢಿಸಿಕೊಂಡಿದ್ದಾರೆ. ಇದರ ಪರಿಣಾಮ ಇಂತಹ ವಂಚನೆ ಪ್ರಕರಣಗಳು ನಡೆಯುತ್ತಿವೆ ಎಂದ ಅವರು, ಇಂತಹ ಅನೇಕ ಪ್ರಕರಣಗಳು ನಡೆದಿರುವ ಬಗ್ಗೆ ಶಂಕೆ ಇದೆ. ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಬಳಿಕ ಹೆಚ್ಚು ಮಾಹಿತಿ ಲಭ್ಯವಾಗಲಿದೆ ಎಂದರು.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ ?
ನಗರದ ಕೋಟೆ ಬಡಾವಣೆಯ ಯೋಗೀಶ್ ಎಂಬವರು ಆಸ್ತಿ ತೆರಿಗೆ ಪಾವತಿಸಲು ಮಾ.5ರಂದು ನಗರಸಭೆ ಬಿಲ್ಕಲೆಕ್ಟರ್ ಶ್ಯಾಮ್ ರವರ ಬಳಿ 10,300ರೂ ನೀಡಿದ್ದಾರೆ. ಶ್ಯಾಮ್ ಬ್ರೋಕರ್ ಕೇಶವ ಎಂಬಾತನಿಗೆ ಹಣ ನೀಡಿದ್ದಾನೆ. ನಂತರ ಶ್ಯಾಮ್ ತೆರಿಗೆ ಪಾವತಿ ಚಲನನ್ನು ಯೋಗಿಶ್ ಅವರಿಗೆ ನೀಡಿದ್ದು, ಚಲನ್ ಪರಿಶೀಲನೆ ನಡೆಸಿದಾಗ ಅದರಲ್ಲಿ ಒಂದು ವಾರದ ಹಿಂದಿನ ದಿನಾಂಕ ನಮೂದಾಗಿರುವುದನ್ನು ಯೋಗೀಶ್ ಗಮನಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಯೋಗೀಶ್ ಈ ವಿಚಾರವನ್ನು ನಗರಸಭೆ ಆಯುಕ್ತ ಬಸವರಾಜ್ ಗಮನಕ್ಕೆ ತಂದಾಗ ಅವರು, ತೆರಿಗೆದಾರ ಯೋಗೀಶ್ ಅವರು ನೀಡಿದ ಹಣ ಏನಾಯಿತು ಎಂದು ಶ್ಯಾಮ್ ಅವರನ್ನು ಪ್ರಶ್ನಿಸಿದ್ದಾರೆ. ಆಗ, ಹಣವನ್ನು ಬ್ರೋಕರ್ ಕೇಶವ್ ಎಂಬವರ ಮೂಲಕ ಬ್ಯಾಂಕಿಗೆ ಜಮೆ ಮಾಡಿಸಿರುವುದಾಗಿ ತಿಳಿಸಿದ್ದು, ಕೇಶವ್ ನಕಲಿ ಬ್ಯಾಂಕ್ ಸೀಲ್ ಬಳಸಿಕೊಂಡು ಹಣ ಜಮೆ ಮಾಡದೇ ವಂಚಿಸಿರುವುದು ಬೆಳಕಿಗೆ ಬಂದಿದೆ.
ಇಂತದ್ದೇ ಎರಡನೇ ಪ್ರಕರಣ ಬೆಳಕಿಗೆ
ತೆರಿಗೆ ಪಾವತಿಯಲ್ಲಿ ನಗರಸಭೆಗೆ ವಂಚನೆ ಮಾಡಿರುವ ಒಂದು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ನಗರಸಭೆ ಆಯುಕ್ತ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸುವಾಗ ಇಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದ ಉಪ್ಪಳ್ಳಿ ಬಡಾವಣೆಯ ನೆಹರುನಗರದ ನಾಸೀರುನ್ನಿಸಾ ಎಂಬವರು 2021, ಜ.7ರಂದು ಕಟ್ಟಡ ಅಭಿವೃದ್ಧಿ ತೆರಿಗೆಯಾದ 22 ಸಾವಿರ ರೂ. ಹಣವನ್ನು ನಗರಸಭೆ ಸಿಬ್ಬಂದಿ ಶ್ಯಾಮ್ ಗೆ ನೀಡಿದ್ದರು. ಈ ಹಣ ಬ್ಯಾಂಕಿಗೆ ಪಾವತಿಯಾಗಿರುವ ಚಲನ್ ನೀಡಲಾಗಿದೆಯಾದರೂ ನಗರಸಭೆ ಖಾತೆಗೆ ಹಣ ಜಮೆಯಾಗಿಲ್ಲ. ಪರಿಶೀಲನೆ ವೇಳೆ ನಾಸಿರುನ್ನೀಸಾ ಅವರು ಪಾವತಿಸಿದ ತೆರಿಗೆ ಹಣಕ್ಕೂ ನಕಲಿ ಬ್ಯಾಂಕ್ ಸೀಲ್ ಬಳಸಿ ವಂಚನೆ ಮಾಡಿರುವುದು ಪತ್ತೆಯಾಗಿದೆ ಎಂದು ನಗರಸಭೆ ಆಯುಕ್ತ ಬಸವರಾಜ್ ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ನಿರ್ದೇಶನದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತೆರಿಗೆ ಹಣ ವಂಚನೆ ಸಂಬಂಧ ನಗರಸಭೆ ಸಿಬ್ಬಂದಿ ಶ್ಯಾಮ್ ಹಾಗೂ ದಲ್ಲಾಳಿ ಕೇಶವ್ ಎಂಬವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಇಂತಹ ಎಷ್ಟು ವಂಚನೆ ಪ್ರಕರಣಗಳು ನಡೆದಿವೆ, ನಕಲಿ ಬ್ಯಾಂಕ್ ಸೀಲ್ ಹೇಗೆ ಇವರ ಕೈಗೆ ಸೇರಿದೆ, ಒಟ್ಟು ಎಷ್ಟು ಹಣ ವಂಚಿಸಲಾಗಿದೆ ಎಂಬುದು ತಿಳಿದು ಬರಬೇಕಿದೆ. ಸಾರ್ವಜನಿಕರು ತಾವು ಪಾವತಿಸಿದ ತೆರಿಗೆಯ ಬಗ್ಗೆ ನಗರಸಭೆಗೆ ಭೇಟಿ ನೀಡಿ ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಸಾರ್ವಜನಿಕರು ನಗರಸಭೆ ಕಚೇರಿಗೆ ಖುದ್ದಾಗಿ ಬಂದು ನಗರಸಭೆ ಚಲನ್ ಪಡೆದುಕೊಂಡು ತಾವೇ ನೇರವಾಗಿ ತೆರಿಗೆ ಹಣ ಪಾವತಿ ಮಾಡಿದರೆ ಇಂತಹ ಪ್ರಕರಣಗಳು ನಡೆಯುವುದಿಲ್ಲ. ದಲ್ಲಾಳಿಗಳನ್ನು ಅವಲಂಭಿಸುವುದರಿಂದ ಇಂತಹ ಪ್ರಕರಣಗಳಿಗೆ ಆಸ್ಪದ ಆಗುತ್ತದೆ. ನಗರಸಭೆ ಆವರಣದಲ್ಲಿ ದಲ್ಲಾಳಿಗಳಿಗೆ ನಿಷೇದ ಇದ್ದರೂ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದಲ್ಲಾಳಿಗಳ ಹಾವಳಿ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಳ್ಳಲಾಗುವುದು.
-ಬಸವರಾಜ್, ನಗರಸಭೆ ಆಯುಕ್ತ







