ಗ್ರೀನ್‌ಕಾರ್ಡ್‌ಗೆ ಆಗ್ರಹಿಸಿ ಭಾರತೀಯ ಅಮೆರಿಕನ್ ಆರೋಗ್ಯ ಸೇವಕರಿಂದ ಧರಣಿ
ವಾಶಿಂಗ್ಟನ್, ಮಾ. 18: ಅಮೆರಿಕದಲ್ಲಿ ಖಾಯಂ ಆಗಿ ವಾಸಿಸಲು ಅವಕಾಶ ನೀಡುವ ಗ್ರೀನ್‌ಕಾರ್ಡ್ ಪಡೆಯುವುದಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿರುವ ಭಾರತೀಯ ಅಮೆರಿಕನ್ ಮುಂಚೂಣಿ ಆರೋಗ್ಯ ಸೇವೆ ಉದ್ಯೋಗಿಗಳು ಬುಧವಾರ ಅಮೆರಿಕದ ಸಂಸತ್‌ನ ಎದುರುಗಡೆ ಧರಣಿ ನಡೆಸಿದರು.
ಗ್ರೀನ್‌ಕಾರ್ಡ್ ವಿತರಣೆಯಲ್ಲಿ ವಿಧಿಸಲಾಗಿರುವ ದೇಶವಾರು ಮಿತಿಯನ್ನು ರದ್ದುಪಡಿಸುವಂತೆ ಅವರು ಸಂಸದರು ಮತ್ತು ಬೈಡನ್ ಸರಕಾರವನ್ನು ಒತ್ತಾಯಿಸಿದರು.
ಎಚ್-1ಬಿ ವೀಸಾದಲ್ಲಿ ಅಮೆರಿಕಕ್ಕೆ ಬಂದಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಹಾಲಿ ವಲಸೆ ವ್ಯವಸ್ಥೆಯ ಸಂತ್ರಸ್ತರಾಗಿದ್ದಾರೆ. ಪ್ರಸಕ್ತ ಗ್ರೀನ್‌ಕಾರ್ಡ್ ವಿತರಣೆಯಲ್ಲಿ ದೇಶವೊಂದಕ್ಕೆ ಏಳು ಶೇಕಡ ಮಿತಿಯನ್ನು ಹೇರಲಾಗಿದೆ.
‘‘ನಾವು ಮುಂಚೂಣಿ ಕೋವಿಡ್ ಸೇನಾನಿಗಳು. ಗುತ್ತಿಗೆಯ ಶರತ್ತುಗಳಿಗೆ ಒಳಗಾಗಿ ನಮ್ಮ ಬದುಕು ಹೇಗೆ ಜೀತದಾಳುಗಳ ಬದುಕಾಗಿ ಪರಿವರ್ತನೆಗೊಂಡಿದೆ ಎನ್ನುವುದನ್ನು ಹೇಳಲು ನಾವಿಲ್ಲಿಗೆ ಬಂದಿದ್ದೇವೆ. ಇಲ್ಲಿನ ಪ್ರತಿಯೊಬ್ಬರಲ್ಲೂ ಒಂದೊಂದು ಕತೆಯಿದೆ. ನ್ಯಾಯ ಕೇಳುವುದಕ್ಕಾಗಿ ದೇಶದ ಎಲ್ಲೆಡೆಯಿಂದ ನಾವಿಲ್ಲಿಗೆ ಬಂದಿದ್ದೇವೆ. ನಾವು ದಶಕಗಳಿಂದ ನ್ಯಾಯವಂಚಿತರಾಗಿದ್ದೇವೆ’’ ಎಂದು ಡಾ. ರಾಜ್ ಕರ್ನಾಟಕ ಮತ್ತು ಡಾ. ಪ್ರಣವ್ ಸಿಂಗ್ ಹೇಳಿದರು.





