ಕಲ್ಲಿನ ಕೋರೆಗಳಲ್ಲಿ ಅಕ್ರಮ ಸ್ಫೋಟಕ ಬಳಕೆ: ಪ್ರಕರಣ ದಾಖಲು
ಮಂಗಳೂರು, ಮಾ.18: ಕಪ್ಪು ಕಲ್ಲು ಕೋರೆಯಲ್ಲಿ ಅಕ್ರಮವಾಗಿ ಸ್ಫೋಟಕ ಬಳಸುತ್ತಿದ್ದ ಮಾಲಕರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 5ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ.
ಮೂಲ್ಕಿ ಠಾಣಾ ವ್ಯಾಪ್ತಿಯ ಪಂಜ ಕಲ್ಲಿನ ಕೋರೆಗೆ ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ರೇವತಿ ಅವರು ಸಿಬ್ಬಂದಿ ಜತೆ ತೆರಳಿ ಪರಿಶೀಲನೆ ನಡೆಸಿದಾಗ ಪರವಾನಿಗೆ ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದಿದೆ.
ಬರ್ಕೆ ಇನ್‌ಸ್ಪೆಕ್ಟರ್ ಜ್ಯೋತಿರ್ಲಿಂಗ ಹೊನಕಟ್ಟೆ ಅವರು ಸಿಬ್ಬಂದಿ ಜತೆ ಐಕಳ ಪಾದೆ ಎಂಬಲ್ಲಿ ಕಪ್ಪು ಕಲ್ಲು ಕೋರೆಗೆ ತೆರಳಿ ಪರಿಶೀಲಿಸಿದಾಗ ಅಕ್ರಮವಾಗಿ ಸ್ಫೋಟಕ ಬಳಸುತ್ತಿರುವುದು ಕಂಡು ಬಂದಿದೆ. ಇನ್‌ಸ್ಪೆಕ್ಟರ್ ಕುಸುಮಾಧರ ಅವರು ಸಿಬ್ಬಂದಿ ಜತೆ ಐಕಳ ಪಾದೆಯಲ್ಲಿ ಇನ್ನೊಂದು ಕೋರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿಯೂ ಅಕ್ರಮವಾಗಿ ಸ್ಫೋಟಕ ಬಳಸುತ್ತಿರುವುದು ಕಂಡು ಬಂದಿದೆ. ನಿಯಮ ಉಲ್ಲಂಘಿಸಿದ ಎಲ್ಲ ಕೋರೆಗಳ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊಣಾಜೆ ಠಾಣೆ ಪಿಎಸ್‌ಐ ಶರಣಪ್ಪ ಭಂಡಾರಿ ಸಿಬ್ಬಂದಿ ಜತೆ ಬಾಳೆಪುಣಿ ಗ್ರಾಮದ ಕಲ್ಲುಕೋರೆಗೆ ಭೇಟಿ ನೀಡಿ ಪರಿಶೀಲಸಿದಾಗ ಸ್ಫೋಟಕ ಬಳಸಿ ಕಲ್ಲುಗಳನ್ನು ಸಿಡಿಸುತ್ತಿರುವುದು ಕಂಡು ಬಂದಿದೆ. ಬಜ್ಪೆ ಪಿಎಸ್‌ಐ ಪೂವಪ್ಪ ಅವರು ಸಿಬ್ಬಂದಿ ಜತೆ ಬಡಗ ಎಡಪದವು ಗರೋಡಿ ಎಂಬಲ್ಲಿರುವ ಕಲ್ಲುಕೋರೆಗೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ಸಂದರ್ಭ ಅಲ್ಲಿ ಅಕ್ರಮವಾಗಿ ಸ್ಫೋಟಕ ಬಳಸಿ ಕಲ್ಲು ಸಿಡಿಸುತ್ತಿರುವುದು ಕಂಡು ಬಂದಿದೆ. ಅಲ್ಲಿಂದ ಟಿಪ್ಪರ್ ಲಾರಿ ಹಾಗೂ ಸಿಡಿಸಿದ್ದ ಕಲ್ಲುಗಳನ್ನು ವಶಕ್ಕೆ ಪಡೆದು ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.







