ಸಿಡಿ ಪ್ರಕರಣ: ವೀಡಿಯೊ ಬಿಡುಗಡೆ ಮಾಡಿ ತಮ್ಮ ವಿರುದ್ಧದ ಆರೋಪ ಅಲ್ಲಗಳೆದ ಮಾಜಿ ಪತ್ರಕರ್ತರು

ಬೆಂಗಳೂರು, ಮಾ.18: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿಗಳ ಮಾಜಿ ಪತ್ರಕರ್ತರಿಬ್ಬರೂ, ವೀಡಿಯೊ ಬಿಡುಗಡೆ ಮಾಡಿ, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಮಾಜಿ ಪತ್ರಕರ್ತ ನರೇಶ್ ಗೌಡ ಗುರುವಾರ ವೀಡಿಯೊ ಸಂದೇಶ ಬಿಡುಗಡೆ ಮಾಡಿದ್ದು, ನಾನು ಸಿಟ್ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಸಂಚು ನಡೆದಿದೆ. ಹಾಗಾಗಿ, ಸದ್ಯಕ್ಕೆ ನಾನು ವಿಚಾರಣೆಗೆ ಹಾಜರಾಗುವುದಿಲ್ಲ. ಆದರೆ, ಐದು ಅಥವಾ ಎಂಟು ದಿನಗಳ ಒಳಗಡೆ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನಾನು ಯಾವುದೇ ದುಡ್ಡು ತೆಗೆದುಕೊಂಡಿಲ್ಲ ಎಂದಿರುವ ಅವರು, ಖಾಸಗಿ ಸುದ್ದಿವಾಹಿನಿಯಲ್ಲಿ ಉದ್ಯೋಗದಲ್ಲಿದ್ದ ವೇಳೆ ಸಾಕಷ್ಟು ಸ್ಟಿಂಗ್ ಆಪರೇಷನ್ ಮಾಡಿದ್ದು, ಈ ಸಂದರ್ಭದಲ್ಲಿ ಯಾವುದೇ ಆರೋಪ ಬಂದಿಲ್ಲ. ಆದರೆ, ಈ ಪ್ರಕರಣದಲ್ಲಿ ಏಕೆ ಬಂದಿದೆ ಗೊತ್ತಿಲ್ಲ ಎಂದರು.
ಯುವತಿ ಗೊತ್ತು?: ಪತ್ರಕರ್ತನಾಗಿರುವ ಕಾರಣ ಯುವತಿ ನಾಲ್ಕೈದು ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್ ಜಾರಕಿಹೊಳಿಯಿಂದ ಅನ್ಯಾಯ ಆಗಿದ್ದು, ನ್ಯಾಯ ಕೊಡಿಸಬೇಕೆಂದರು. ತದನಂತರ, ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಉತ್ತರಿಸಿದೆ. ಈ ನಡುವೆ ನನ್ನ ತಾಯಿಗೆ ಅನಾರೋಗ್ಯ, ಪುತ್ರಿಯ ನಾಮಕರಣವಿತ್ತು. ಹೀಗಾಗಿ, ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ತಿಳಿಸಿದರು.
ಹಲವು ಬಾರಿ ಆ ಯುವತಿಯೊಂದಿಗೆ ಮಾತನಾಡಿದ್ದು, ನನ್ನ ಮಗಳ ನಾಮಕರಣಕ್ಕೆ ಬಂದು ಹೋಗಿದ್ದಾರೆ. ಆದರೆ, ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರದಾರಿ ಎಂಬುವ ರೀತಿ ಬಿಂಬಿಸಲಾಗುತ್ತಿದೆ. ಯಾವುದೇ ಸಣ್ಣ ಪಾತ್ರವೂ ಇಲ್ಲದಿದ್ದರೂ, ಕೋಟ್ಯಂತರ ರೂಪಾಯಿ ಹಣ ಪಡೆದಿರುವ ಆರೋಪ ಹೊರಿಸಲಾಗುತ್ತಿದೆ ಎಂದು ಆರೋಪಿಸಿದರು.
ಭವಿತ್ ಹೇಳಿದ್ದೇನು?: ಮತ್ತೋರ್ವ ಮಾಜಿ ಪತ್ರಕರ್ತ, ಚಿಕ್ಕಮಗಳೂರಿನ ಆಲ್ದೂರಿನ ಭವಿತ್ ಪ್ರತಿಕ್ರಿಯಿಸಿ, ರಮೇಶ್ ಜಾರಕಿಹೊಳಿ ವೀಡಿಯೊ ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ನನ್ನ ಮೇಲೆ ಸುಖಾಸುಮ್ಮನೆ ಆರೋಪ ಹೊರಿಸಲಾಗಿದೆ. ಮಾಧ್ಯಮಗಳಲ್ಲಿ ಸಿಡಿ ಸೂತ್ರದಾರ ಎಂದು ಬಿಂಬಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದು ವೇಳೆ ನಾನೇನಾದರೂ ತಪ್ಪು ಮಾಡಿದ್ದರೆ ಮೊಬೈಲ್ ಸಂಪರ್ಕ ಕಡಿತಗೊಳಿಸಿ ತಲೆಮರೆಸಿಕೊಳ್ಳುತ್ತಿದ್ದೆ ಎಂದಿರುವ ಅವರು, ಸಿಟ್ ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತಿದ್ದೇನೆ. ದಯವಿಟ್ಟು ನನ್ನನ್ನು ತಪ್ಪಿತಸ್ಥನಂತೆ ಮಾಧ್ಯಮದಲ್ಲಿ ಬಿಂಬಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಿಟ್ ದಾಳಿ: ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಟ್ ತನಿಖಾಧಿಕಾರಿಗಳು ಯುವತಿಯ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದು, ಇಲ್ಲಿನ ಆರ್‍ಟಿ ನಗರದಲ್ಲಿ ಆಕೆ ನೆಲೆಸಿದ್ದ ಅತಿಥಿ ಗೃಹದ ಮೇಲೆ ದಾಳಿ ನಡೆಸಿ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭದಲ್ಲಿ ಆಕೆಗೆ ಸೇರಿದ್ದು ಎನ್ನಲಾದ ಹಲವು ವಸ್ತುಗಳನ್ನು ಜಪ್ತಿ ಮಾಡಿರುವುದಾಗಿ ತಿಳಿದುಬಂದಿದೆ.







