ಹುಲಿ ಕಾರ್ಯಾಚರಣೆ: ಅಸ್ಪಷ್ಟ ನಿಲುವು ಆರೋಪ; ಪ್ರತಿಭಟನಾಕಾರರಿಂದ ಜಿಲ್ಲಾಧಿಕಾರಿ ಕಾರಿಗೆ ತಡೆ

ಮಡಿಕೇರಿ, ಮಾ.18: ಮಾನವ ಮತ್ತು ಜಾನುವಾರು ಜೀವಹಾನಿ ಮಾಡುತ್ತಿರುವ ಹುಲಿ ಸೆರೆ ಕುರಿತು ಜಿಲ್ಲಾಡಳಿತ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸುತ್ತಿಲ್ಲವೆಂದು ಆರೋಪಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಾರಿಗೆ ತಡೆಯೊಡ್ಡಿದ ಪ್ರಕರಣ ದಕ್ಷಿಣ ಕೊಡಗಿನ ಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ರೈತ ಸಂಘದ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಯುತ್ತಿರುವ ಬೆಳ್ಳೂರು ಗ್ರಾಮಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು.
ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಹುಲಿ ದಾಳಿಯಾಗುತ್ತಿರುವುದರಿಂದ ರೈತರ ಸಂಘ ಹಾಗೂ ಗ್ರಾಮಸ್ಥರು ಕಳೆದ 9 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅರಣ್ಯ ಇಲಾಖೆ ನಿರಂತರವಾಗಿ ಹುಲಿ ಸೆರೆಯ ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆ. ಹುಲಿ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಬಾಕಿ ಇರುವ ಹಣವನ್ನು ಶೀಘ್ರದಲ್ಲೆ ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಇಲ್ಲಿಯವರೆಗೆ ಯಶಸ್ಸು ದೊರೆತಿಲ್ಲ. ರೈತ ಸಂಘಟನೆ ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದಾಗ ಹುಲಿ ಸೆರೆಹಿಡಿಯುವ ಪೊಳ್ಳು ಭರವಸೆಗಳನ್ನು ನೀಡುತ್ತಿದ್ದಾರೆಯೇ ಹೊರತು, ಮತ್ತಾವುದೇ ಫಲಿತಾಂಶ ಗೋಚರಿಸಿಲ್ಲ. ಅರಣ್ಯ ಸಿಬ್ಬಂದಿಗಳು ಹುಲಿಯನ್ನು ಕೊಂದು ತರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಸ್ಪಷ್ಟಪಡಿಸಿದರು.
ಜನರ ಹಿತ ಕಾಪಾಡಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಆರೋಪಿಸಿದ ಅವರು ನೆಪ ಮಾತ್ರಕ್ಕೆ ಕಾರ್ಯಾಚರಣೆ ಮಾಡುತ್ತಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಪ್ರಶ್ನಿಸಿದರು. ಇಲ್ಲಿಯವರೆಗೆ ಅರಣ್ಯ ಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರಿಗೆ ತಡೆ
ಜಿಲ್ಲಾಧಿಕಾರಿಗಳ ಭರವಸೆಗಳಿಂದ ತೃಪ್ತರಾಗದ ಪ್ರತಿಭಟನಾಕಾರರು ಕಾರನ್ನು ತಡೆದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕಾಗಮಿಸಿ ಮಾತನಾಡಿದ ಸಿಸಿಎಫ್, ಹುಲಿ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ರಾತ್ರಿ ಹಗಲೆನ್ನದೆ ಹುಲಿ ಸೆರೆ ಹಿಡಿಯಲು ಶ್ರಮಿಸುತ್ತಿದ್ದಾರೆ ಎಂದರು. ಹುಲಿ ದಾಳಿಗೆ ಸಿಲುಕಿ ಮೃತ ಪಟ್ಟವರ ಕುಟುಂಬಕ್ಕೆ ಬಾಕಿ ಇರುವ ಹಣದ ಚೆಕ್‍ನ್ನು ಇಂದು ಅಥವಾ ನಾಳೆ ನೀಡುತ್ತೇವೆ ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಕಾರು ತೆರಳಲು ಅವಕಾಶ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಕದ್ದಣಿಯಂಡ ಹರೀಶ್ ಬೋಪಣ್ಣ, ಅಜ್ಜಮಾಡ ಕಟ್ಟಿ ಮಂದಯ್ಯ, ಜಿಲ್ಲಾ ಪಂಚಾಯತ್ ಸದಸ್ಯ ಶಿವು ಮಾದಪ್ಪ, ವಕೀಲರಾದ ಎಂ.ಟಿ. ಕಾರ್ಯಪ್ಪ, ತಾಪಂ ಸದಸ್ಯ ಫಲ್ವಿನ್ ಪೂಣಚ್ಚ, ಚಕ್ಕೇರ ವಾಸು, ಮೂಕಳೇರ ಕುಶಾಲಪ್ಪ, ಎ.ಪಿ. ಮೋಟಯ್ಯ, ಇಟ್ಟಿರ ಲಾಲಾ, ಚಕ್ಕೇರ ಸನ್ನಿ ಮತ್ತಿತರರು ಪಾಲ್ಗೊಂಡಿದ್ದರು.
ಹುಲಿ ಮೇಲೆ ನಿಗಾ
ಈ ನಡುವೆ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ದಾಳಿ ಮಾಡುತ್ತಿರುವ ಹುಲಿಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಹುಲಿಯ ಚಲನವಲನಗಳು ಕಂಡು ಹಿಡಿಯಲು ಬೆಳ್ಳೂರು, ಹರಿಹರ, ಕುಮಟೂರು, ಕೋಟಗೆರಿ, ಹೈಸೊಡ್ಲೂರು ಗ್ರಾಮದ ವಿವಿಧ ಭಾಗಗಳಲ್ಲಿ ಟ್ರಾಪ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಸುಮಾರು 8 ಮಂದಿ ಟ್ರಾಕರ್ಸ್ ಗಳನ್ನೊಳಗೊಂಡ 4 ತಂಡಗಳನ್ನು ರಚಿಸಿ ಕುಮಟೂರು, ಹರಿಹರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.








