ಪ್ರತಾಪ್ ಭಾನು ಮೆಹ್ತಾ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ: ಉಪ ಕುಲಪತಿಗೆ ಪತ್ರ ಬರೆದ ಅಶೋಕ ವಿ.ವಿ. ಸಿಬ್ಬಂದಿ

ಹೊಸದಿಲ್ಲಿ, ಮಾ. 17: ರಾಜಕೀಯ ವಿಜ್ಞಾನಿ ಪ್ರತಾಪ್ ಭಾನು ಮೆಹ್ತಾ ಅವರು ಪ್ರಾಧ್ಯಾಪಕರ ಹುದ್ದೆಗೆ ರಾಜೀನಾಮೆ ನೀಡಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿ ಸೋನಿಪತ್‌ನ ಅಶೋಕ ವಿಶ್ವವಿದ್ಯಾನಿಲಯದ ಭೋದಕ ಸಿಬ್ಬಂದಿ ವಿ.ವಿ.ಯ ಉಪ ಕುಲಪತಿ ಮಾಳವಿಕಾ ಸರ್ಕಾರ್ ಅವರಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿ ಅವರ ತೀವ್ರ ಟೀಕಾಕಾರರಾಗಿದ್ದ ಮೆಹ್ತಾ ಅವರು ಮಂಗಳವಾರ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅವರ ರಾಜಕೀಯ ಅಭಿಪ್ರಾಯಗಳು ಹಾಗೂ ಬರಹಗಳು ರಾಜೀನಾಮೆ ನೀಡಲು ಕಾರಣವಾಯಿತೇ ಎಂಬ ಪ್ರಶ್ನೆಯಿಂದ ವಿಶ್ವವಿದ್ಯಾನಿಲಯ ನುಣುಚಿಕೊಂಡಿತು. ಮೆಹ್ತಾ ಅವರು ಕೂಡ ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಿರಲಿಲ್ಲ. ಮಾಳವಿಕಾ ಸರ್ಕಾರ್ ಅವರಿಗೆ ಬರೆದ ಪತ್ರದಲ್ಲಿ 90 ಬೋಧಕ ಸಿಬ್ಬಂದಿ ಸಹಿ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘‘ಪ್ರಾಧ್ಯಾಪಕ ಮೆಹ್ತಾ ಅವರು ತಮ್ಮ ರಾಜೀನಾಮೆ ಪತ್ರವನ್ನು ಹಿಂಪಡೆಯಲು ವಿಶ್ವವಿದ್ಯಾನಿಲಯ ಕೋರುವಂತೆ ನಾವು ಮನವಿ ಮಾಡುತ್ತೇವೆ. ಬೋಧಕ ಸಿಬ್ಬಂದಿ ನಿಯೋಜನೆ, ವಜಾದ ಆಂತರಿಕ ಶಿಷ್ಟಾಚಾರಗಳ ಬಗ್ಗೆ ವಿಶ್ವವಿದ್ಯಾನಿಲಯ ಸ್ಪಷ್ಟನೆ ನೀಡುವಂತೆ ಹಾಗೂ ಶೈಕ್ಷಣಿಕ ಸ್ವಾತಂತ್ರ್ಯದ ಸಿದ್ಧಾಂತಕ್ಕೆ ಅನುಗುಣವಾಗಿ ಸಾಂಸ್ಥಿಕ ಬದ್ಧತೆಯನ್ನು ಮರು ಸ್ಥಾಪಿಸುವಂತೆ ನಾವು ಮನವಿ ಮಾಡುತ್ತಿದ್ದೇವೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.





