ದಕ್ಷಿಣ ಕನ್ನಡ ಜಿಲ್ಲೆಯ ಹಿಂ.ವರ್ಗಗಳಿಗೆ ಅನ್ಯಾಯ ಆಗದಂತೆ ಎಚ್ಚರ ವಹಿಸಿ: ಶಾಸಕ ಯು.ಟಿ.ಖಾದರ್

ಬೆಂಗಳೂರು, ಮಾ. 18: ‘ಹಿಂದುಳಿದ ವರ್ಗಗಳ ಪ್ರವರ್ಗ ‘2ಎ'ಗೆ ಯಾವುದೇ ಸಮುದಾಯಗಳನ್ನು ಸೇರ್ಪಡೆ ಮಾಡುವ ಮೊದಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪೂಜಾರಿ, ಬಿಲ್ಲವ ಸೇರಿದಂತೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಇತರೆ ಸಮುದಾಯಗಳಿಗೆ ಅನ್ಯಾಯ ಆಗದಂತೆ ಎಚ್ಚರ ವಹಿಸಬೇಕು' ಎಂದು ಕಾಂಗ್ರೆಸ್ ಸದಸ್ಯ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ 2021-22ನೆ ಸಾಲಿನ ಆಯವ್ಯಯದ ಮೇಲೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಮತವನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ, ಅವರು ಯಾರೂ ಹಿಂದುಳಿದ ವರ್ಗಗಳ ಮೀಸಲಾತಿ ವಿಷಯದ ಚರ್ಚೆಯ ಕುರಿತು ಮಾತನಾಡುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.
‘ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದ ವಿದ್ಯಾಸಿರಿ, ವಿದ್ಯಾರ್ಥಿ ವೇತನ, ವಿದೇಶಿ ಶಿಕ್ಷಣಕ್ಕೆ ಸಾಲ ಮತ್ತು ನೆರವು ಯೋಜನೆ ನಿಲ್ಲಿಸಲಾಗಿದೆ. ಪಿಎಚ್‍ಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಲಾಗಿದೆ. ರಿಕ್ಷಾ ಚಾಲಕರು, ದರ್ಜಿಗಳ ಸಹಿತ ಅಸಂಘಟಿತ ವಲಯದ ಕಾರ್ಮಿಕರಿಗೆ ಬಜೆಟ್‍ನಲ್ಲಿ ಅನುದಾನ ನೀಡಿಲ್ಲ' ಎಂದು ಖಾದರ್ ಗಮನ ಸೆಳೆದರು.
‘2020-21ನೆ ಸಾಲಿನಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 1,200 ಕೋಟಿ ರೂ.ಘೋಷಣೆ ಮಾಡಿದ್ದು, 823 ಕೋಟಿ ರೂ.ಅನುಮೋದನೆ ನೀಡಿ, 546 ಕೋಟಿ ರೂ.ಬಿಡುಗಡೆ ಮಾಡಿದ್ದು, ಆ ಪೈಕಿ ಕೇವಲ 417 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 1,500 ಕೋಟಿ ರೂ. ಘೋಷಣೆ ಮಾಡಿದ್ದು, ಅನುದಾನದಲ್ಲಿ 1,300 ಕೋಟಿ ರೂ. ತೋರಿಸಲಾಗಿದೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ಘೋಷಣೆ ಮಾಡಿದೆ. ಅಂದರೆ ಈ ಸರಕಾರ ಬರೀ ಘೋಷಣೆ ಮಾಡುವುದಕ್ಕೆ ಸೀಮಿತವಾಗಿದೆ' ಎಂದು ಖಾದರ್ ದೂರಿದರು.
ಹೊಸ ಪಡಿತರ ಚೀಟಿ ಕೊಡಿ: ‘ಹೊಸ ಪಡಿತರ ಚೀಟಿ ವಿತರಣೆಗೆ ಸಂಬಂಧಿಸಿದ 1.50 ಲಕ್ಷ ಅರ್ಜಿ ಬಾಕಿ ಇದ್ದು, 6 ಲಕ್ಷಕ್ಕೂ ಅಧಿಕ ಮಂದಿಗೆ ಪಡಿತರ ಸೌಲಭ್ಯ ವಂಚನೆ ಮಾಡಲಾಗಿದೆ. ಸ್ಥಗಿತಗೊಳಿಸಿರುವ ಪಡಿತರ ಚೀಟಿ ವಿತರಣೆಯನ್ನು ಪುನರ್ ಆರಂಭಿಸಬೇಕು. ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ರಸ್ತೆ ಅಪಘಾತ ಸಂಧರ್ಭದಲ್ಲಿ ಉಚಿತ ಚಿಕಿತ್ಸೆ ಒದಗಿಸುವ ‘ಹರೀಶ್ ಸಾಂತ್ವನ ಯೋಜನೆ' ಆರಂಭಿಸಬೇಕು' ಎಂದು ಖಾದರ್ ಆಗ್ರಹಿಸಿದರು.
ಅವರು ದೇಶಪ್ರೇಮಿಗಳೇಗೆ?: ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಜೊತೆಗೆ ಬಡವರು ತಮ್ಮ ಮದುವೆ ಇನ್ನಿತರ ಸಮಾರಂಭಗಳಿಗೆ ಖರೀದಿಸುತ್ತಿದ್ದ ಬಂಗಾರದ ಬೆಲೆಯೂ ಮಿತಿಮೀರಿದೆ. ಈ ಸರಕಾರಕ್ಕೆ ಬೆಲೆಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗಿಲ್ಲ. ಬ್ಯಾಂಕ್ ಖಾಸಗಿಕರಣ ಮಾಡುತ್ತಿರುವವರು ದೇಶಪ್ರೇಮಿಗಳಾದರೆ, ರಾಷ್ಟ್ರೀಕರಣ ಮಾಡಿದವರು ದೇಶದ್ರೋಹಿಗಳಾಗಿದ್ದಾರೆ' ಎಂದು ಖಾದರ್ ವಾಗ್ದಾಳಿ ನಡೆಸಿದರು.
‘ಬಜೆಟ್‍ನಲ್ಲಿ ಕರಾವಳಿ ಪ್ರದೇಶದ ಮೀನುಗಾರಿಕೆಗೆ ಯಾವುದೇ ಯೋಜನೆ ನೀಡಲಿಲ್ಲ. ಅಲ್ಲದೆ, ಅವರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿದ್ದ ಸೀಮೆಎಣ್ಣೆಯನ್ನು 300 ಲೀಟರ್ ನಿಂದ 100 ಲೀ.ಗೆ ಇಳಿಕೆ ಮಾಡಲಾಗಿದೆ. ಕರಾವಳಿಯಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರಿಗೆ ಸರಕಾರ ನೆರವು ನೀಡಬೇಕು' ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧಕ್ಕೆ ಏಕರೂಪದ ಕಾನೂನು ಏಕಿಲ್ಲ?
‘ಕೇರಳ ರಾಜ್ಯದಲ್ಲಿ ಬಿಜೆಪಿ ಮತದಾರರಿಗೆ ಗುಣಮಟ್ಟದ ದನದ ಮಾಂಸದ ಆಶ್ವಾಸನೆ ನೀಡಿದೆ. ಗೋವಾಕ್ಕೆ ಬೆಳಗಾವಿಯಿಂದ ದನದ ಮಾಂಸ ರಫ್ತು ಆಗುತ್ತಿದೆ. ಆದರೆ, ಪಶು ಸಂತತಿ ಹೆಚ್ಚಿಸುವ ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ಪಶುಭಾಗ್ಯ ಯೋಜನೆ ನಿಲ್ಲಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮೂಲಕ ಗೋ ಸಂತತಿ ನಾಶಕ್ಕೆ ಸರಕಾರ ಮುಂದಾಗಿದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ, ಒನ್ ಕಾರ್ಡ್, ಒನ್ ರೇಷನ್' ಎಂದು ಹೇಳುವ ಬಿಜೆಪಿಯವರು ಗೋಹತ್ಯೆ ನಿಷೇಧಕ್ಕೆ ದೇಶದಲ್ಲಿ ಏಕರೂಪದ ಕಾನೂನನ್ನು ಏಕೆ ರೂಪಿಸುತ್ತಿಲ್ಲ'
-ಯು.ಟಿ.ಖಾದರ್, ಕಾಂಗ್ರೆಸ್ ಸದಸ್ಯ







