"ದೇಶದಲ್ಲಿ ಹಸಿವಿನ ಸಮಸ್ಯೆಯಿದೆ ಎಂಬ ವರದಿಗಳಿಗೆ ಗಮನ ನೀಡಬೇಡಿ, ಇಲ್ಲಿ ಬೀದಿನಾಯಿಗಳಿಗೂ ಶೀರಾ ತಿನ್ನಿಸುತ್ತೇವೆ"
ಸಂಸತ್ ನಲ್ಲಿ ಹೇಳಿಕೆ ನೀಡಿದ ಕೇಂದ್ರ ಸಚಿವ

ಹೊಸದಿಲ್ಲಿ,ಮಾ.19: ಭಾರತದಲ್ಲಿ ಬೀದಿನಾಯಿಗಳಿಗೂ ಅವು ಮರಿಗಳನ್ನು ಹಾಕಿದರೆ ಶಿರಾ ತಿನ್ನಿಸಲಾಗುತ್ತದೆ,ಹೀಗಾಗಿ ಎನ್‌ಜಿಒಗಳು ತಯಾರಿಸುವ ಹಸಿವಿನ ವರದಿಗಳಿಗೆ ದೇಶವು ಕಿವಿಗೊಡಬೇಕಿಲ್ಲ ಎಂದು ಕೇಂದ್ರ ಸಹಾಯಕ ಕೃಷಿ ಸಚಿವ ಪುರುಷೋತ್ತಮ ರುಪಾಲಾ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಜಾಗತಿಕ ಹಸಿವು ಸೂಚಿ 2020ರಲ್ಲಿ ಭಾರತದ ಕಳಪೆ ರ್ಯಾಂಕ್ ಕುರಿತು ಆಪ್ ಸಂಸದ ಸಂಜಯ ಸಿಂಗ್ ಅವರ ಹೇಳಿಕೆಗೆ ರುಪಾಲಾ ಉತ್ತರಿಸುತ್ತಿದ್ದರು.
2019ರಲ್ಲಿ ಭಾರತದ 102ನೇ ಸ್ಥಾನದಲ್ಲಿತ್ತು,2020ರಲ್ಲಿ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದೆ. ಹೀಗಾಗಿ ದೇಶದಲ್ಲಿ ಹಸಿವೆಯ ಸ್ಥಿತಿ ಸುಧಾರಿಸಿದೆ ಎಂದು ಸಚಿವರು ತನ್ನ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ ಎಂದು ಸಿಂಗ್ ಹೇಳಿದರು.
ವಿಶ್ವದ ಅಗ್ರ 10 ಆಹಾರ ಸಂಸ್ಕರಣೆ ದೇಶಗಳಲ್ಲಿ ಒಂದಾಗಿದ್ದರೂ ಭಾರತವೂ ಈಗಲೂ ಹಸಿವು ಸೂಚಿಯಲ್ಲಿ ಕಳಪೆ ಸ್ಥಾನದಲ್ಲಿದೆ ಎಂದ ಸಿಂಗ್ ನೇಪಾಲ,ಬಾಂಗ್ಲಾದೇಶ ಮತ್ತು ಶ್ರೀಲಂಕಾಗಳಂತಹ ನೆರೆಯ ದೇಶಗಳು ಭಾರತಕ್ಕಿಂತ ಮೇಲಿನ ಸ್ಥಾನದಲ್ಲಿವೆ ಎಂದು ಬೆಟ್ಟು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರುಪಾಲಾ,ಸೂಚಿಯನ್ನು ಸಿದ್ಧಪಡಿಸಲು ಅನುಸರಿಸಿದ ವಿಧಿವಿಧಾನಗಳು ಮತ್ತು ದತ್ತಾಂಶಗಳ ನಿಖರತೆಯ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಸರಕಾರವು ಈಗಾಗಲೇ ಎನ್‌ಜಿಒ ವೆಲ್ಟ್‌ಹಂಗರ್‌ಹಿಲ್ಫ್‌ಗೆ ಪತ್ರವನ್ನು ಬರೆದಿದೆ,ಆದರೆ ಅದಿನ್ನೂ ಉತ್ತರಿಸಿಲ್ಲ ಎಂದರು.
ಉದಾಹರಣೆಯೊಂದನ್ನು ನೀಡಿದ ರುಪಾಲಾ,‘ನಮ್ಮ ಗ್ರಾಮದಲ್ಲಿ ಬೀದಿನಾಯಿಗಳು ಮರಿಗಳನ್ನು ಹಾಕಿದಾಗ ನಮ್ಮ ಮಹಿಳೆಯರು ಅವುಗಳಿಗೆ ಶಿರಾ ತಿನ್ನಿಸುತ್ತಾರೆ. ಕೆಲವೊಮ್ಮೆ ನಾಯಿಗಳು ಕಚ್ಚಿದಾಗಲೂ ನಾವು ಅವುಗಳಿಗೆ ಶಿರಾ ನೀಡುತ್ತೇವೆ. ದೇಶದಲ್ಲಿ ಇಂತಹ ಸಂಪ್ರದಾಯಗಳಿರುವಾಗ ಯಾವುದೋ ಎನ್‌ಜಿಒ ನಮ್ಮ ಮಕ್ಕಳ ಕುರಿತು ಇಂತಹ ವರದಿ( ಹಸಿವು ಸೂಚಿಗೆ ಸಂಬಂಧಿಸಿ) ನೀಡಿದರೆ ಅದಕ್ಕೆ ನಾವು ಸಂವೇದಿಸಬೇಕಿಲ್ಲ. ಇಂತಹ ಸರ್ವೆಗಳಲ್ಲಿ ದಷ್ಟಪುಷ್ಟ ಆರೋಗ್ಯವಂತ ಮಕ್ಕಳನ್ನೂ ಸೇರಿಸಲಾಗುತ್ತದೆ ’ಎಂದರು.
ದೇಶದಲ್ಲಿ ಆಹಾರದ ಕೊರತೆ ಇಲ್ಲ. ಸರಕಾರದ ಬಳಿ ಅಗತ್ಯಕ್ಕಿಂತ ದುಪ್ಪಟ್ಟು ಅಂದರೆ 529.59 ಲ.ಟನ್‌ಗಳಷ್ಟು ಆಹಾರ ಧಾನ್ಯಗಳ ಕಾಯ್ದಿರಿಸಿದ ಸಂಗ್ರಹವಿದೆ ಎಂದು ರುಪಾಲಾ ತಿಳಿಸಿದರು. ಆದರೆ ಮೂಲಸೌಕರ್ಯ ಕೊರತೆಯಿಂದಾಗಿ ಬೇಗ ಕೆಡುವ ಕೆಲವು ಆಹಾರ ವಸ್ತುಗಳು ವ್ಯರ್ಥವಾಗುತ್ತಿವೆ ಎನ್ನುವುದನ್ನು ಒಪ್ಪಿಕೊಂಡರು. ಇದನ್ನು ಬಗೆಹರಿಸಲು ಪ್ರಧಾನಿಯವರು ಕೊಯ್ಲಿನ ನಿರ್ವಹಣೆಗಾಗಿ ಇದೇ ಮೊದಲ ಬಾರಿಗೆ ಕೃಷಿ ಮೂಲಸೌಕರ್ಯ ನಿಧಿಯ ಅಡಿ ಒಂದು ಲಕ್ಷ ಕೋ.ರೂ.ಗಳನ್ನು ಒದಗಿಸಿದ್ದಾರೆ ಎಂದರು.







