10 ಸೆಂಟ್ಸ್ ವರೆಗಿನ ಕೃಷಿ ಭೂಮಿ ಪರಿವರ್ತನೆಗೆ ಏಕರೂಪ ನೀತಿ ಜಾರಿ: ಸಚಿವ ಶಿವರಾಮ್ ಹೆಬ್ಬಾರ್

ಬೆಂಗಳೂರು, ಮಾ. 19: ‘ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 10 ಸೆಂಟ್ಸ್ ವರೆಗಿನ (4,200 ಚದರ ಅಡಿ) ಜಾಗವನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು' ಎಂದು ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಕೆ.ರಘುಪತಿ ಭಟ್ ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಪರವಾಗಿ ಉತ್ತರ ನೀಡಿದ ಅವರು, ಮುಂದಿನ ಮಂಗಳವಾರ ಮೇಲ್ಕಂಡ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಕರೆದು ಏಕರೂಪ ನೀತಿ ಜಾರಿ ಮಾಡುವುದು. ಇದರಿಂದ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿನ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಉಡುಪಿ, ಮಂಗಳೂರು, ಶಿವಮೊಗ್ಗಕ್ಕೆ ಮಾತ್ರ ಅನ್ವಯವಾಗದಂತೆ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿಯನ್ನು ಜಾರಿ ಮಾಡಲು ಸಚಿವರಿಗೆ ನಿರ್ದೇಶನ ನೀಡಬೇಕೆಂದು ಸ್ಪೀಕರ್ ಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸ್ಪೀಕರ್, ಈ ಸಮಸ್ಯೆ ರಾಜ್ಯಾದ್ಯಂತ ಇದೆ ಎಂಬುದನ್ನು ಶಾಸಕರು ನನ್ನ ಗಮನಕ್ಕೂ ತಂದಿದ್ದಾರೆ. ಇಂತಹ ತಾರತಮ್ಯ ಅನುಸರಿಸುವುದು ಬೇಡ. ಅಧಿಕಾರ ವಿಕೇಂದ್ರೀಕರಣ ಉದ್ದೇಶವೇ ಎಲ್ಲರಿಗೂ ನ್ಯಾಯ ಸಿಗಬೇಕು. ಹೀಗಾಗಿ ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಶಾಸಕ ರಘುಪತಿಭಟ್, ಉಡುಪಿ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿನ 10 ಸೆಂಟ್ಸ್ ವರೆಗಿನ ಜಾಗಕ್ಕೆ ಭೂ ಪರಿವರ್ತನೆ ಮಾಡಲು ನಗರಸಭೆ ನಿರ್ಣಯ ಕೈಗೊಂಡಿತ್ತು. ಎರಡು ವರ್ಷವಾದರೂ ಇದು ಇತ್ಯರ್ಥ ಆಗಿಲ್ಲ. ಸಾರ್ವಜನಿಕರಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಭೂ ಪರಿವರ್ತನೆ ಸಮಸ್ಯೆ ಇತ್ಯರ್ಥಕ್ಕೆ ದೊಡ್ಡ ಜಾಲವಿದೆ. ಆ ಬ್ರೋಕರ್ ಗಳಿಗೆ ಲಂಚ ನೀಡಿದರೆ ಕ್ಷಣಾರ್ಧದಲ್ಲೇ ಸಮಸ್ಯೆ ಇತ್ಯರ್ಥವಾಗುತ್ತದೆ. ನಾನು ಆಡಳಿತ ಪಕ್ಷದ ಶಾಸಕನಾಗಿ ಈ ವಿಷಯ ಪ್ರಸ್ತಾಪಿಸಬಾರದು. ಆದರೆ, ನನ್ನ ಕ್ಷೇತ್ರದ ಜನರ ಸಮಸ್ಯೆ, ಹೇಳಲೇಬೇಕಾಗಿದೆ ಎಂದ ಅವರು, ನಮ್ಮ ನೋವು ಇಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ಸರಕಾರ ಇದಕ್ಕೆ ಸ್ಪಷ್ಟ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.







