''ಡಾ.ಶಿವರಾಮ ಕಾರಂತ ಪಿಲಿಕುಲ ನಿಸರ್ಗಧಾವು ವೈವಿಧ್ಯತೆಯ ಆಗರ- ಸಮರ್ಥ ನಿರ್ವಹಣೆ ಕೊರತೆ''

ಮಂಗಳೂರು, ಮಾ.19: ನಗರದ ಹೊರವಲಯದಲ್ಲೇ ಸುಮಾರು 400 ಎಕರೆ ಭೂ ಪ್ರದೇಶದಲ್ಲಿ ನಿರ್ಮಾಣವಾಗಿರುವ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ವೈವಿಧ್ಯಯ ತಾಣ. ಪ್ರವಾಸೋದ್ಯಮಕ್ಕೆ ಪೂರಕವಾದ, ಪ್ರವಾಸಿಗರಿಗೆ ಮಾತ್ರವಲ್ಲದೆ, ದೈನಂದಿನ ಕೆಲಸದ ಒತ್ತಡದ ನಡುವೆ ರಿಲ್ಯಾಕ್ಸ್ ಮಾಡಿಕೊಳ್ಳಲು, ವಿಶ್ರಾಂತಿ ಪಡೆಯಲು ಯೋಗ್ಯವಾದ ಸ್ಥಳವಾದ ಈ ತಾಣಕ್ಕೆ ಸಮರ್ಥ ನಿರ್ವಹಣೆ ಕೂಡಾ ಅತೀ ಅಗತ್ಯವಾಗಿದೆ.
ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ನೇತೃತ್ವದಲ್ಲಿ ಇಂದು ಪತ್ರಕರ್ತರಿಂದ ಪಿಲಿಕುಳದಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು. ಈ ಸಂದರ್ಭ ಪಿಲಿಕುಳದ ಜೈವಿಕ ಉದ್ಯಾನವನದ ಪ್ರಾಕೃತಿಕ ಸೌಂದರ್ಯದ ವಿಶಾಲ ಅನಾವರಣದ ಜತೆಗೆ ಸಾಕಷ್ಟು ಕೊರತೆಗಳೂ ಗೋಚರಿಸಿದವು.
ಮಂಗಳೂರಿನ ಹೃದಯಭಾಗದಿಂದ 10 ಕಿ.ಮೀ. ದೂರದಲ್ಲಿರುವ ಪಿಲಿಕುಲ ನಿಸರ್ಗಧಾಮವು ಏಷ್ಯಾದ ಎರಡನೆ ದೊಡ್ಡ ಹಾಗೂ ತಾರಾಲೋಕದ ವಿಸ್ಮಯವನ್ನು ಕಣ್ಣೆದುರು ತೆರೆಡಿಡುವ ದೇಶದ ಪ್ರಥಮ 3ಡಿ ತಾರಾಲಯವನ್ನು ಹೊಂದಿದೆ. 1996ರಲ್ಲಿ ಅಭಿವೃದ್ಧಿ ಯೋಜನೆ ಗಳಡಿ ಅಂದಿನ ಜಿಲ್ಲಾಧಿಕಾರಿ ಡಾ. ಭರತ್ ಲಾಲ್ ಮೀನಾ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಈ ನಿಸರ್ಗಧಾಮ ಪಶ್ಚಿಮ ಘಟ್ಟದ ಸಸ್ಯಗಳ ಪ್ರಬೇಧಗಳನ್ನು ಹೊಂದಿರುವ ಸಸ್ಯಕಾಶಿಯೇ ಸುಮಾರು 85 ಎಕರೆ ಪ್ರದೇಶದಲ್ಲಿ ಆವರಿಸಿಕೊಂಡಿದೆ. ಕರಾವಳಿಯ ಶ್ರೀಮಂತ ಮನೆತನದ ವೈಭವವನ್ನು ಸಾರುವ ಗುತ್ತಿನ ಮನೆ ಇಲ್ಲಿನ ಮತ್ತೊಂದು ವಿಶೇಷವಾದರೆ, ದೋಣಿ ವಿಹಾರ ಕೇಂದ್ರ ಇಲ್ಲಿನ ಪ್ರಮುಖ ಆಕರ್ಷಣೆ. ಜತೆಗೆ ವಿಜ್ಞಾನದ ಕೌತುಕಗಳನ್ನು ಪ್ರದರ್ಶಿಸುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಜತೆಗೆ ಹುಲಿ, ಚಿರತೆ, ಸಿಂಹ, ಕರಡಿ, ಜಿಂಕೆ, ಕಾಳಿಂಗ ಸರ್ಪ ಸೇರಿದಂತೆ ದೇಶ ವಿದೇಶಗಳ ಪ್ರಾಣಿ ಪಕ್ಷಿಗಳನ್ನು ಹೊಂದಿರುವ ವಿಶಾಲವಾದ ಮೃಗಾಲಯವನ್ನೂ ಒಳಗೊಂಡಿದೆ. ಆರ್ಕಿಡೇರಿಯಂನಲ್ಲಿ ಪಶ್ಚಿಮ ಘಟ್ಟದ ವಿಶೇಷ ಆರ್ಕಿಡ್‌ಗಳನ್ನು ಸಂರಕ್ಷಿಸಲಾಗಿದೆ. ಪ್ರಪಂಚದ 27 ಜಾತಿಯ ತಳಿಗಳ ಬಿದಿರು, ಬೆತ್ತಗಳನ್ನು ಇಲ್ಲಿ ಬೆಳೆಸಲಾಗಿದೆ.
ವಾಟರ್ ಪಾರ್ಕ್ (ಸದ್ಯ ಕೊರೋನ ಹಿನ್ನೆಲೆಯಲ್ಲಿ ಇದು ಮುಚ್ಚಲ್ಪಟ್ಟಿದ್ದು, ಗುತ್ತಿಗೆದಾರರಿಗೆ ವಾಟರ್ ಪಾರ್ಕ್ ಜತೆಗೆ ಅಮ್ಯೂಸ್‌ಮೆಂಟ್ ಪಾರ್ಕ್ ಕೂಡಾ ಆರಂಭಿಸಬೇಕೆಂಬ ಹಿನ್ನೆಲೆಯಲ್ಲಿ ಮತ್ತೆ ಜಾಗತಿಕ ಟೆಂಡರ್‌ಗೆ ಆಹ್ವಾನ ನೀಡಲಾಗಿದೆ), ಸಂಸ್ಕೃತಿ ಗ್ರಾಮದಲ್ಲಿ ವಿವಿಧ ರೀತಿಯ ಕರಕುಶಲ ವಸ್ತುಗಳ ತಯಾರಿಕೆ ಹಾಗೂ ಪ್ರದರ್ಶನವನ್ನು ಪ್ರತಿಬಿಂಬಿಸುವ (ನೇಕಾರಿಕೆ, ಕಂಬಾರಿಕೆ, ಗಾಣ, ಕಮ್ಮಾರಿಕೆ, ಬಡಗಿ ಮೊದಲಾದ ಎಲ್ಲಾ ರೀತಿಯ ಸೌಲಭ್ಯಗಳ)ಗುಡಿ ಕೈಗಾರಿಕೆಗಳ ವಿಶಾಲ ಅನಾವರಣವೂ ಇಲ್ಲಿದೆ. ಪಶ್ಚಿಮ ಘಟ್ಟದ ಅನೇಕ ಬೀಜ, ಔಷಧಿ ಸಸ್ಯಗಳ ಅಂಗಗಳು, ಮರ ಪ್ರಬೇಧಗಳು, ವಿನಾಶದ ಅಂಚಿನಲ್ಲಿರುವ ಸಸ್ಯಗಳು, ಸೇರಿದಂತೆ ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ ಸಸ್ಯ ಪ್ರಿಯರು, ಅಧ್ಯಯನಕಾರರಿಗೆ ಹೊಸ ಲೋಕವನ್ನೇ ಸೃಷ್ಟಿಸುತ್ತಿದೆ. ಇದಲ್ಲದೆ ಮತ್ಸಾಲಯ, ಕರಕುಶಲ ವಸ್ತುಗಳ ಮಾರಾಟಕ್ಕಾಗಿ ಅರ್ಬನ್ ಹಾಥ್, ಬಯಲು ರಂ ಮಂದಿರ, ಅರ್ಬನ್ ಇಕೋ ಪಾರ್ಕ್ ಮೊದಲಾದವುಗಳಿದ್ದರೂ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಬಳಲುತ್ತಿದೆ.
ಸುಮಾರು 75 ಎಕರೆ ಪ್ರದೇಶದಲ್ಲಿ 18 ಗುಂಇಗಳ ಗಾಲ್ಫ್ ಕೋರ್ಸ್ ಇಲ್ಲಿದ್ದು, 600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ನಿಸರ್ಗಧಾಮದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶ ಇಲ್ಲದಿರುವುದರಿಂದ ಪ್ರಸ್ತುತ ಒಳಗಡೆ ಸುತ್ತಾಡಲು ಹಾಗೂ ಮೃಗಾಲಯದೊಳಗೆ ಅಗತ್ಯವಿರುವವರಿಗೆ ಸುತ್ತಾಡಲು ಬಗ್ಗೀಸ್‌ಗಳ ವ್ಯವಸ್ಥೆ ಇದೆ. ಸದ್ಯ 20ಕ್ಕೂ ಅಧಿಕ ಬಗ್ಗೀಸ್‌ಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಹುತೇಕ ಬಗ್ಗೀಸ್‌ಗಳ ಚಾಲಕರು ಮಹಿಳೆಯರೇ ಆಗಿರುವುದು ಇಲ್ಲಿನ ವಿಶೇಷತೆ. ಮೃಗಾಲಯದೊಳಗೆ ಸುತ್ತಾಡಲು ತಲಾ 100 ರೂ. ನೀಡಿ ಬಗ್ಗೀಸ್‌ನಲ್ಲಿ ಪ್ರಯಾಣಿಸಬಹುದಾಗಿದೆ. ಬಗ್ಗೀಸ್‌ನ ಚಾಲಕರು ಪ್ರಾಣಿ ಪಕ್ಷಿಗಳ ಪರಿಚಯ, ಮಾಹಿತಿ ನೀಡುತ್ತಾ, ಮೃಗಾಲಯವನ್ನು ಸುತ್ತಾಡಿಸುತ್ತಾರೆ. ಹೊರಗಡೆ ಬಗ್ಗೀಸ್‌ಗಳು ದೋಣಿ ವಿಹಾರ ಕೇಂದ್ರ, ಗುತ್ತಿನ ಮನೆಯವರೆಗೆ 30 ರೂ. ದರದಲ್ಲಿ ಹೊತ್ತು ಸಾಗಿಸುತ್ತವೆ.
ಹೊಸ ಯೋಜನೆಗಳು
ನಿಸರ್ಗಧಾಮದಲ್ಲಿ ಅರ್ಬನ್ ಇಕೋ ಪಾರ್ಕ್‌ನ ಪ್ರಥಮ ಹಂತದ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ. ವಿಶೇಷವಾಗಿ ಮಹಿಳಾ ಗುಂಪು ಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರಿಗೆ ನಿರಂತರವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 17.60 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ.
ಇದೇ ವೇಳೆ ನ್ಯಾಷನಲ್ ಕೌನ್ಸಿಲ್ ಆಫ್ ಸಾಯನ್ಸ್ ಮ್ಯೂಸಿಯಂ ಕೊಲ್ಕತ್ತಾ ಮತ್ತು ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ವೈಜ್ಞಾನಿಕ ಅನ್ವೇಷಣೆಗಾಗಿ 180 ಲಕ್ಷ ರೂ. ವೆಚ್ಚದಲ್ಲಿ ಇನ್ನೋವೇಶನ್ ಹಬ್ ರಚನೆ ಕಾಮಗಾರಿ ಪ್ರಗತಿಯಲ್ಲಿದೆ.
‘‘ಸದ್ಯ ನಿಸರ್ಗಧಾಮದಲ್ಲಿ 80 ಮಂದಿ ಸಿಬ್ಬಂದಿ ನೇರ ನೇಮಕಾತಿ ಹಾಗೂ 75 ಮಂದಿ ಹೊರ ಗುತ್ತಿಗೆಯಡಿ (ಭದ್ರತೆ, ಹೌಸ್ ಕೀಪಿಂಗ್ ಸೇರಿದಂತೆ) ಕಾರ್ಯ ನಿರ್ವಹಿಸುತ್ತಿದ್ದಾರೆ. ಮೃಗಾಲಯದ ಪ್ರಾಣಿಗಳಿಗೆ ಬೀಫ್, ಕೋಳಿ, ಮೊಟ್ಟೆ, ಮೀನು, ಮೊದಲಾದ ಮಾಂಸಾಹಾರವನ್ನು ಒದಗಿಸಲಾಗುತ್ತಿದೆ. ತಿಂಗಳಿಗೆ ಸುಮಾರು 45 ಲಕ್ಷ ರೂ.ನಂತೆ ವಾರ್ಷಿಕ 5 ಕೋಟಿ ರೂ.ಗಳ ಖರ್ಚುವೆಚ್ಚವಾಗುತ್ತಿದೆ. ಭೇಟಿ ನೀಡುವವರಿಂದ ಟಿಕೆಟ್ ರೂಪದಲ್ಲಿ ವಾರ್ಷಿಕ 3.5 ಕೋಟಿ ರೂ. ಸಂಗ್ರಹವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಸುಮಾರು ಎಂಟು ತಿಂಗಳ ಕಾಲ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ ಬಂದ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇಲ್ಲಿನ ಪ್ರಾಣಿ ಪಕ್ಷಿಗಳಿಗೆ ಆಹಾರದ ಖರ್ಚು ವೆಚ್ಚ ತೂಗಿಸಲು ಕಷ್ಟವಾಗಿತ್ತು. ಎಂಆರ್‌ಪಿಎಲ್ ಸಂಸ್ಥೆ ಪ್ರಾಣಿಗಳನ್ನು ದತ್ತುಪಡೆದ ಕಾರಣ ಸ್ವಲ್ಪ ಮಟ್ಟಿಗೆ ಖರ್ಚನ್ನು ಸುಧಾರಿಸಲಾಯಿತು. ಎಪ್ರಿಲ್‌ನಿಂದ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿಸರ್ಗಧಾಮ ಮತ್ತಷ್ಟು ಹೊಸತನದೊಂದಿಗೆ ಕಾರ್ಯ ನಿರ್ವಹಿಸಲಿದೆ’’
- ಗೋಕುಲ್ ದಾಸ್ ನಾಯಕ್, ಕಾರ್ಯನಿರ್ವಾಹಕ ನಿರ್ದೇಶಕರು, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ.
ದಿನಕ್ಕೆ ಸರಾಸರಿ ನೂರಾರು ಸಂಖ್ಯೆಯಲ್ಲಿ, ವೀಕೆಂಡ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಆಸಕ್ತರನ್ನು ತನ್ನತ್ತ ಬರಮಾಡಿಕೊಳ್ಳುವ ಎಕರೆಗಟ್ಟಲೆ ಪ್ರದೇಶದಲ್ಲಿ ಹರಡಿರುವ ಪಿಲಿಕುಳ ನಿಸರ್ಗಧಾಮದೊಳಗೆ ಸೂಕ್ತ ಮಾಹಿತಿಯನ್ನು ನೀಡುವ ಗೈಡ್‌ಗಳಿಲ್ಲ! ಒಳಗಡೆ ಅಗತ್ಯ ಹಾಗೂ ಕಣ್ಣಿಗೆ ಕಾಣುವ ರೀತಿಯಲ್ಲಿ, ಮಾಹಿತಿಯನ್ನು ಒದಗಿಸಬಲ್ಲ ರೀತಿಯಲ್ಲಿ ಸೂಚನಾ ಫಲಕಗಳಿಲ್ಲ! ತುಳುನಾಡಿನ ಸಂಸ್ಕೃತಿ, ಇಲ್ಲಿನ ಕಲೆ, ಇಲ್ಲಿನ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಗುತ್ತಿನ ಮನೆಯಲ್ಲಿನ ಪಾರಂಪರಿಕ, ಪುರಾತನ ಪೀಠೋಪಕರಣಗಳು, ವೈವಿಧ್ಯತೆಗಳು ಧೂಳು ತುಂಬಿವೆ. ಕೆಲ ವರ್ಷಗಳ ಹಿಂದೆ ಮಕ್ಕಳ ಹಬ್ಬ, ಕಂಬಳ, ನದಿ ಉತ್ಸವ, ಮೀನು ಹಿಡಿಯುವ ಸ್ಪರ್ಧೆ, ಹಲಸು ಮಾವು ಮೇಳಗಳ ಮೂಲಕ ಜನ ಮಾನಸ ದಲ್ಲಿ ಹೊಸ ಹುರುಪು ನೀಡಿದ್ದ, ಪ್ರವಾಸೋದ್ಯಮ ತಾಣವಾಗಿ ಹೊಸ ಯೋಜನೆಗಳಿಗೆ ಪುಷ್ಠಿ ನೀಡಿರುವ ನಿಸರ್ಗಧಾಮಕ್ಕೆ ಹೊಸ ಸ್ಪರ್ಶ, ಕಾಯಕಲ್ಪದ ಅಗತ್ಯವಿದೆ.
ಪಿಲಿಕುಲ ನಿಸರ್ಗಧಾಮ ಹಾಗೂ ಪ್ರಾದೇಶಿಕ ವಿಜ್ಞಾನ ಕೇಂದ್ರ ಎಂಬ ಎರಡು ಸೊಸೈಟಿಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ದ.ಕ. ಜಿಲ್ಲಾಧಿಕಾರಿ ಅಧ್ಯಕ್ಷತೆಯ 23 ಮಂದಿ ಸದಸ್ಯರ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿ 24.12.2019ರಿಂದ ಜಾರಿಗೆ ಬರುವುದಾಗಿ ಸರಕಾರ ಅಧಿಸೂಚನೆ ಹೊರಡಿಸಿದೆ. ಎಪ್ರಿಲ್ ತಿಂಗಳಿನಿಂದ ಈ ಪ್ರಾಧಿಕಾರ ಅಧಿಕೃತವಾಗಿ ಕಾರ್ಯಾಚರಿಸುವ ಸೂಚನೆಗಳೂ ಕಂಡು ಬರುತ್ತಿದ್ದು, ಈ ಮೂಲಕವಾದರೂ ಪಿಲಿಕುಳ ನಿಸರ್ಗಧಾಮವನ್ನು ಅತ್ಯುತ್ತಮ ಪ್ರವಾಸಿ ತಾಣವಾಗಿ ಮಾರ್ಪಡಿಸುವ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅತ್ಯುತ್ತಮ ವ್ಯವಸ್ಥೆಗಳೊಂದಿಗೆ ಹೊಸ ರೂಪು, ಕಾಯಕಲ್ಪ ನೀಡುವ ನಿರೀಕ್ಷೆ ಇದೆ.







