ಶನಿವಾರ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ 'ರೈತ ಮಹಾಪಂಚಾಯತ್'
ಸಿಎಂ ತವರು ಕ್ಷೇತ್ರದಲ್ಲಿ ರಣಕಹಳೆ ಮೊಳಗಿಸಲಿರುವ ರೈತರು

ಶಿವಮೊಗ್ಗ,ಮಾ.19: ಸಮಾಜವಾದಿ ತವರು ನೆಲ, ರೈತ ಚಳವಳಿಯ ನೆಲ ಎಂದೇ ಖ್ಯಾತಗಳಿಸಿರುವ ಶಿವಮೊಗ್ಗ ದಕ್ಷಿಣ ಭಾರತದ ಮೊದಲ ಮಹಾಪಂಚಾಯತ್‌ಗೆ ಸಾಕ್ಷಿಯಾಗುತ್ತಿದೆ. ಕೃಷಿ ಕಾಯ್ದೆಗಳನ್ನು ವಿರೋಧಿಸಿ ದಿಲ್ಲಿಯಲ್ಲಿ 100ಕ್ಕೂ ಹೆಚ್ಚು ದಿನಗಳಿಂದ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟಿಸುತ್ತಿರುವ ರಾಕೇಶ್ ಟಿಕಾಯತ್ ಮಾ.20ರಂದು ರೈತರಿಗೆ ಸಂದೇಶ ಆಗಮಿಸಲಿದ್ದಾರೆ.
ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ 100ಕ್ಕೂ ಹೆಚ್ಚು ದಿನಗಳಿಂದ ಪಂಜಾಬ್, ಹರ್ಯಾಣ, ದಿಲ್ಲಿ ಭಾಗದ ರೈತರು ದಿಲ್ಲಿಯ ಗಡಿಭಾಗದಲ್ಲಿ ಬೃಹತ್ ಹೋರಾಟ ನಡೆಸುತ್ತಿದ್ದು, ಅದರ ಕಾವು ಉತ್ತರ ಭಾರತದ ರಾಜ್ಯಗಳಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ವಿಸ್ತರಣೆಯಾಗುತ್ತಿದೆ. ಅದರ ಮೊದಲ ಭಾಗವಾಗಿ ಮುಖ್ಯಮಂತ್ರಿಗಳ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಪ್ರತಿಭಟನಾ ಸಮಾವೇಶ ನಡೆಯಲಿದೆ. ಶಿವಮೊಗ್ಗ ಅಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ರೈತರು ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.
ರೈತರ ಹೋರಾಟ ಬೆಂಬಲಿಸಲು ದಿಲ್ಲಿಗೆ ಹೋಗಿದ್ದ ರೈತ ಮುಖಂಡರಿಗೆ ರಾಕೇಶ್ ಟಿಕಾಯತ್ ಹೋರಾಟವನ್ನು ದೇಶವ್ಯಾಪಿ ವಿಸ್ತರಿಸಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ ಶಿವಮೊಗ್ಗದಲ್ಲಿ ದಕ್ಷಿಣ ರಾಜ್ಯಗಳ ಮೊದಲ ಸಭೆ ನಡೆಯಲಿದೆ. ಇದರ ಉಸ್ತುವಾರಿಯನ್ನು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ರೈತ ಸಂಘಗಳ ವರಿಷ್ಠರಾದ ಕೆ.ಟಿ.ಗಂಗಾಧರ್, ಎಚ್.ಆರ್.ಬಸವರಾಜಪ್ಪ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಕೆ.ಪಿ.ಶ್ರೀಪಾಲ್, ಕೆ.ಎಲ್.ಅಶೋಕ್, ಡಿಎಸ್‌ಎಸ್‌ನ ಎಂ.ಗುರುಮೂರ್ತಿ, ಅನನ್ಯ ಶಿವು ವಹಿಸಿಕೊಂಡಿದ್ದು, ಒಂದು ತಿಂಗಳಿನಿಂದ ಹಳ್ಳಿ ಹಳ್ಳಿ ಸುತ್ತಿ ಸಂಘಟನೆ ಮಾಡುತ್ತಿದ್ದಾರೆ. ಇವರಿಗೆ ಬಿಜೆಪಿ ಹೊರತುಪಡಿಸಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಮಧು ಬಂಗಾರಪ್ಪ, ಕಿಮ್ಮನೆ ರತ್ನಾಕರ್ ಸೇರಿದಂತೆ ನೂರಾರು ಮುಖಂಡರು, ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಒಟ್ಟಾದ ರೈತ ಬಣಗಳು
ನಾನಾ ಕಾರಣಗಳಿಗೆ ವಿಭಜನೆಗೊಂಡಿದ್ದ ರೈತ ಸಂಘಟನೆ ಈ ಸಮಾವೇಶದ ಕಾರಣ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಜತೆಗೆ ದಲಿತ ಸಂಘಟನೆಗಳು ಭಿನ್ನಾಭಿಪ್ರಾಯ ಮರೆತು ಬೆಂಬಲ ಸೂಚಿಸಿವೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಮಹತ್ತರ ಬೆಳವಣಿಗೆಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಮಾ.20ಕ್ಕೆ ಸಮಾವೇಶ
ನಗರದ ಸೈನ್ಸ್ ಮೈದಾನದಲ್ಲಿ ಮಧ್ಯಾಹ್ನ 3 ಗಂಟೆಗೆ ಸಮಾವೇಶ ಆರಂಭಗೊಳ್ಳಲಿದ್ದು, ಜಿಲ್ಲೆಯ ಎಲ್ಲೆಡೆಯಿಂದ ರೈತರು ಭಾಗವಹಿಸಲಿದ್ದಾರೆ. ಮಾ.20ರ ಬೆಳಗ್ಗೆ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್, ಯುದ್ದವೀರ್ ಸಿಂಗ್ ಮುಂತಾದವರು ಬೆಂಗಳೂರಿನಿಂದ ಹೊರಟು ಭದ್ರಾವತಿಗೆ 1.30ಕ್ಕೆ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಸೈನ್ಸ್ ಮೈದಾನದ ವೇದಿಕೆಗೆ ಬರುತ್ತಾರೆ. ಅವರಿಗೆ ರಾಜ್ಯದ ರೈತ ಸಂಘಟನೆಗಳ ಮುಖಂಡರು, ದಸಂಸ ಮುಖಂಡರು ಸಾಥ್ ನೀಡಲಿದ್ದಾರೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳು ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ರೈತರ ಬದುಕನ್ನು ಕಷ್ಟಕ್ಕೆ ದೂಡಿವೆ. ಇವುಗಳ ವಿರುದ್ಧ ದ್ವನಿ ಎತ್ತಬೇಕಾಗಿದೆ. ರೈತ ಚಳವಳಿ ಹುಟ್ಟಿದ ಶಿವಮೊಗ್ಗದಿಂದಲೇ ದಕ್ಷಿಣ ರಾಜ್ಯದ ಕಹಳೆ ಮೊಳಗಿಸುತ್ತೇವೆ.
-ಕೆ.ಟಿ ಗಂಗಾಧರ್, ರೈತ ನಾಯಕ
ಕೇಂದ್ರ ಸರ್ಕಾರ ಪದೇಪದೇ ರೈತ ವಿರೋಧಿ, ಜನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಕೇವಲ ಮೂರು ಕೃಷಿ ಕಾಯ್ದೆಗಳ ವಿರುದ್ಧ ಮಾತ್ರ ನಮ್ಮ ಹೋರಾಟವಲ್ಲ. ಕೇಂದ್ರದ ನೀತಿಗಳ ವಿರುದ್ಧ ಜನರು ಸಂಘಟಿತರಾಗುತ್ತಿದ್ದಾರೆ.
-ಕೆ.ಎಲ್ ಅಶೋಕ್, ಜನಪರ ಹೋರಾಟಗಾರ
ವಿವಾದಿತ ಕೃಷಿ ಕಾಯ್ದೆಗಳಿಂದ ಸಾಮಾನ್ಯ ಜನರು ಅನ್ನ ಇಲ್ಲದೇ ಸಾಯುವ ಪರಿಸ್ಥಿತಿ ಬರಲಿದೆ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಕೃಷಿ ಕಾಯ್ದೆ ಜಾರಿಗೆ ತಂದಿದೆ. ದೇಶದಲ್ಲಿ ಮತ್ತೊಂದು ರೈತ ಕ್ರಾಂತಿ ಹುಟ್ಟುಹಾಕಲು ಮೋದಿ ಕಾರಣರಾಗಿದ್ದಾರೆ. ಅವರ ಪ್ರಯತ್ನದ ಫಲವಾಗಿ ರೈತ ಮುಖಂಡರೆಲ್ಲ ಒಗ್ಗಟಾಗಿದ್ದೇವೆ. ಅದಕ್ಕಾಗಿ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇವೆ.
-ಹೆಚ್.ಆರ್ ಬಸವರಾಜಪ್ಪ, ರೈತ ನಾಯಕ
ರೈತರಿಗೆ ಬೇಡವಾದ ಕೃಷಿ ಕಾಯ್ದೆಗಳು ಸರ್ಕಾರಗಳಿಗೆ ಯಾಕೆ ಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೊಧಿ ಕಾನೂನುಗಳನ್ನು ಚರ್ಚೆಯೇ ಇಲ್ಲದೆ ಜಾರಿಗೆ ತಂದಿವೆ. ಸರ್ಕಾರಗಳಿಗೆ ಬುದ್ದಿ ಕಲಿಸಬೇಕು ಎಂದರೆ ಹೊಟ್ಟೆಗೆ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು.
-ಮಧು ಬಂಗಾರಪ್ಪ, ಮಾಜಿ ಶಾಸಕ
ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗೆ ಈಗ ತಂದಿರುವ ಕೃಷಿ ಕಾಯ್ದೆಗಳೇ ಸಾಕ್ಷಿ. ಜನರಿಗೆ ಅನುಕೂಲವಾಗುವ ಯಾವ ಕಾರ್ಯಕ್ರಮಗಳನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿಲ್ಲ.
-ಕಿಮ್ಮನೆ ರತ್ನಾಕರ್, ಮಾಜಿ ಸಚಿವ
ಈ ನೆಲದ ಅನ್ನದಾತರು ಇದೀಗ ನಿರ್ಣಾಯಕ ಹಂತದ ಹೋರಾಟಕ್ಕಿಳಿದಿದ್ದಾರೆ. ದೊಡ್ಡದೊಡ್ಡ ಬಂಡವಾಳಿಗರನ್ನು ಓಲೈಸುವ ಸಲುವಾಗಿ ಆಳುವ ಸರ್ಕಾರಗಳು ನಮ್ಮ ಬಡ ರೈತರನ್ನು ನಿರ್ಲಕ್ಷಿಸುತ್ತಾ ಬರುತ್ತಿರುವುದು ಹೊಸದೇನು ಅಲ್ಲ. ರೈತ ಮಹಾ ಪಂಚಾಯತ್ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಮೂಲಕ ನಮ್ಮ ಬೆಂಬಲ ನೀಡುತ್ತೇವೆ.
-ಆರ್.ಎಂ ಮಂಜುನಾಥ ಗೌಡ, ಮಾಜಿ ಅಧ್ಯಕ್ಷರು, ಅಪೆಕ್ಸ್ ಬ್ಯಾಂಕ್
ಎಷ್ಟೇ ಹೋರಾಟ ನಡೆಸಿದರೂ, ಎಷ್ಟು ವಿರೋಧಗಳು ಆದರೂ ಸರ್ಕಾರಗಳು ಗಮನಿಸುತ್ತಿಲ್ಲ. ಪದೇ ಪದೇ ಜನರಿಗೆ ತೊಂದರೆ ಮಾಡುವ ಕಾಯ್ದೆ ಜಾರಿ ಮಾಡುತ್ತಿದೆ. ಈಗಲಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ.
-ಕೆ.ಪಿ ಶ್ರೀಪಾಲ್, ನಮ್ಮ ಹಕ್ಕು ಸಂಘಟನೆ







