ವಾಟ್ಸ್‌ಆ್ಯಪ್‌ನ ಹೊಸ ಖಾಸಗಿತನ ನೀತಿಯ ಅನುಷ್ಠಾನ ನಿರ್ಬಂಧಿಸುವಂತೆ ದಿಲ್ಲಿ ಹೈಕೋರ್ಟ್‌ಗೆ ಕೇಂದ್ರದ ಆಗ್ರಹ

ಹೊಸದಿಲ್ಲಿ,ಮಾ.19: ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ತನ್ನ ಹೊಸ ಖಾಸಗಿತನ ನೀತಿಯನ್ನು ಮತ್ತು ಸೇವಾ ನಿಬಂಧನೆಗಳನ್ನು ಅನುಷ್ಠಾನಿಸುವುದನ್ನು ನಿರ್ಬಂಧಿಸುವಂತೆ ಕೇಂದ್ರವು ಶುಕ್ರವಾರ ದಿಲ್ಲಿ ಉಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.
ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿಯನ್ನು ಪ್ರಶ್ನಿಸಿ ಸೀಮಾ ಸಿಂಗ್ ಮತ್ತು ಮೇಘನಾ ಸಿಂಗ್ ಸಲ್ಲಿಸಿರುವ ಅರ್ಜಿಗೆ ಉತ್ತರವಾಗಿ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ಆಗ್ರಹವನ್ನು ಮುಂದಿರಿಸಿದೆ.
ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿಯು ಭಾರತೀಯ ದತ್ತಾಂಶ ರಕ್ಷಣೆ ಮತ್ತು ಖಾಸಗಿತನ ಕಾನೂನುಗಳಲ್ಲಿ ಹಲವಾರು ಲೋಪಗಳಿರುವುದನ್ನು ತೋರಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ನೂತನ ನೀತಿಯಡಿ ಬಳಕೆದಾರರು ಅದನ್ನು ಒಪ್ಪಿಕೊಳ್ಳಬಹುದು ಇಲ್ಲವೇ ಆ್ಯಪ್‌ನಿಂದ ನಿರ್ಗಮಿಸಬಹುದು,ಆದರೆ ತಮ್ಮ ದತ್ತಾಂಶಗಳನ್ನು ಇತರ ಫೇಸ್‌ಬುಕ್ ಒಡೆತನದ ಅಥವಾ ಥರ್ಡ್-ಪಾರ್ಟಿ ಆ್ಯಪ್‌ಗಳೊಂದಿಗೆ ಹಂಚಿಕೊಳ್ಳದಂತೆ ಸೂಚಿಸುವ ಯಾವುದೇ ಆಯ್ಕೆಯನ್ನು ಅವರಿಗೆ ನೀಡಲಾಗಿಲ್ಲ.
ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಜಸ್ಮೀತ್ ಸಿಂಗ್ ಅವರ ಪೀಠವು ಪ್ರಕರಣದ ಮುಂದಿನ ವಿಚಾರಣೆಯನ್ನು ಎ.20ಕ್ಕೆ ಮುಂದೂಡಿದೆ.
ಮಾಹಿತಿ ತಂತ್ರಜ್ಞಾನ ನಿಯಮಗಳು ಕಂಪನಿಯೊಂದು ತಾನು ಸಂಗ್ರಹಿಸಿರುವ ಬಳಕೆದಾರರ ದತ್ತಾಂಶಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಹಲವಾರು ಬದ್ಧತೆಗಳನ್ನು ಹೇರಿವೆ. ವಾಟ್ಸ್‌ಆ್ಯಪ್‌ನ ನೂತನ ಖಾಸಗಿತನ ನೀತಿಯು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ)ನಿಯಮಗಳು,2011ನ್ನು ಉಲ್ಲಂಘಿಸುತ್ತದೆ ಎಂದಿರುವ ಕೇಂದ್ರವು,ದತ್ತಾಂಶಗಳ ರಕ್ಷಣೆ ಮತ್ತು ಖಾಸಗಿತನ ಕುರಿತು ನಿಯಂತ್ರಣ ವ್ಯವಸ್ಥೆಯನ್ನು ತರುವಂತೆ ಸರ್ವೋಚ್ಚ ನ್ಯಾಯಾಲಯವು ತನಗೆ ಹೊಣೆಗಾರಿಕೆಯನ್ನು ಹೊರಿಸಿತ್ತು ಮತ್ತು ಲೋಕಸಭೆಯಲ್ಲಿ ವೈಯಕ್ತಿಕ ದತ್ತಾಂಶ ರಕ್ಷಣೆ ಮಸೂದೆ,2019ನ್ನು ಮುಂಡಿಸುವ ಮೂಲಕ ತನ್ನ ಬದ್ಧತೆಯನ್ನು ನಿರ್ವಹಿಸಿದ್ದೇನೆ. ಈ ಕಾನೂನು ಜಾರಿಗೊಂಡ ಬಳಿಕ ವಾಟ್ಸ್‌ಆ್ಯಪ್‌ನಂತಹ ಕಂಪನಿಗಳು ಸುರಕ್ಷತೆ ಮತ್ತು ದತ್ತಾಂಶ ರಕ್ಷಣೆಯ ಸೂಕ್ತ ಮಾನದಂಡಗಳಿಗೆ ಅನುಗುಣವಲ್ಲದ ಖಾಸಗಿತನ ನೀತಿಗಳನ್ನು ತರುವುದಕ್ಕೆ ಕಡಿವಾಣ ಹಾಕುತ್ತದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದೆ.







