ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ಕಾರಣವಾದ ಸಿದ್ದರಾಮಯ್ಯರ 'ಪಂಚೆ ಖರೀದಿ'!

ಬೆಂಗಳೂರು, ಮಾ. 19: ‘ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸಬೇಕು. ಬಟ್ಟೆ, ಪಂಚೆ ಎಷ್ಟು ಬೇಕಾದರೂ ಖರೀದಿ ಮಾಡಲಿ. ಆದರೆ, ಬಟ್ಟೆ-ಪಂಚೆ ಕಳಚಿಕೊಳ್ಳುವಂತೆ ಆಗಬಾರದು' ಎಂದು ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ವಿಧಾನಸಭೆಯಲ್ಲಿ ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರಡಿಯಲ್ಲಿ ಬೆಲೆ ಏರಿಕೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದ ಅಂಗಡಿ, ಮಾಲ್‍ಗಳಿಗೆ ಜನರೇ ಹೋಗುತ್ತಿಲ್ಲ. ನಮ್ಮ ಎಚ್.ಡಿ. ರೇವಣ್ಣನಂತಹವರು ಕೆಲವರಷ್ಟೇ ಅಂಗಡಿಗೆ ಹೋಗುತ್ತಾರಷ್ಟೇ ಎಂದು ರೇವಣ್ಣನವರ ಕಾಲೆಳೆದರು.
ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಬಸವರಾಜ ಬೊಮ್ಮಾಯಿಗೆ, ‘ಏಕಪ್ಪ ನಿನಗೆ ಕೋಪ, ನಿನ್ನಂತವರು ಹೋಗಬಹುದು' ಎಂದು ಸಿದ್ದರಾಮಯ್ಯ ಚುಚ್ಚಿದರು. ಬಳಿಕ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ರೇವಣ್ಣನವರದ್ದು ದೊಡ್ದ ಬೇಡಿಕೆಗಳಿಲ್ಲ, ಅವರು ಯಾವ ಅಂಗಡಿಗೆ ಹೋಗಬಹುದು, ನೀವೇ ಹೇಳಿ ಎಂದು ಮಸಾಲೆ ಬೆರೆಸಿದರು.
‘ರೇವಣ್ಣ ಯಾವ ಅಂಗಡಿಗೂ ಹೋಗುವುದಿಲ್ಲ, ಇವರಿಗೂ ಅವರ ಮನೆಯವರೇ ಬಟ್ಟೆ, ಪಂಚೆ ತಂದುಕೊಡುತ್ತಾರೆ. ಆ ಪರಿಸ್ಥಿತಿ ಇರುವುದರಿಂದ ಇವರು ಅಂಗಡಿಗೆ ಹೋಗುವ ಪ್ರಶ್ನೆಯೇ ಇಲ್ಲ' ಎಂದು ಸಿದ್ದರಾಮಯ್ಯ ಹಾಸ್ಯದ ಬಾಣಬಿಟ್ಟರು. ಆದರೆ, ನಾನೇ ಅಂಗಡಿಗೆ ಹೋಗುತ್ತೇನೆ. ನನ್ನ ಬಟ್ಟೇ ನಾನೇ ಖರೀದಿ ಮಾಡಬೇಕು. ನಾನು ಮೊನ್ನೆ ಪಂಚೆ ಖರೀದಿಗೆ ಹೋಗಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಯಿತು' ಎಂದರು.
60 ಸೆಟ್ ಏಕೆ: ‘ಹೌದು ಮೊನ್ನೆ ನೀವು ಅರವತ್ತು ಸೆಟ್ ಪಂಚೆ ಖರೀದಿ ಮಾಡಿದ್ದೀರಿ ಎಂದು ನೋಡಿದೆ. ಅಷ್ಟೊಂದು ಏಕೆ ಮತ್ತು ಅವು ನಿಮಗೆ ಸರಿಯಾಗಿ ಆಗುತ್ತವೆಯೇ' ಎಂದು ಬಸವರಾಜ ಬೊಮ್ಮಾಯಿ ಕೇಳಿದರು. ಇದಕ್ಕೆ ಧ್ವನಿಗೂಡಿಸಿದ ಸ್ಪೀಕರ್, ಜಾಸ್ತಿ ಬಟ್ಟೆ ತೆಗೆದುಕೊಂಡಿದ್ದು, ಯಾರ್ಯಾರಿಗೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ನಾನು ಧೋತಿ ಉಡುತ್ತೇನೆ. ನಮ್ಮ ಮನೆಯಲ್ಲಿ ಸಣ್ಣ ಮಕ್ಕಳಿಲ್ಲ. ಪುತ್ರ ಯತೀಂದ್ರ ಅವರ ಬಟ್ಟೆ ಅವರೇ ಖರೀದಿ ಮಾಡುತ್ತಾರೆ. ಹೆಣ್ಮುಕ್ಕಳು ಅವರೇ ಖರೀದಿಸುತ್ತಾರೆ. ಹೀಗಾಗಿ ನನ್ನ ಬಟ್ಟೆ ನಾನೇ ಖರೀದಿ ಮಾಡುವುದು. ಹೀಗಾಗಿ ಒಟ್ಟಿಗೆ ಖರೀದಿ ಮಾಡಿದ್ದೇನೆ ಎಂದರು.
ನಾನು ಸ್ವಲ್ಪ ದಪ್ಪ ಆದರೂ, ಅವೇನು ಬದಲಾಗಲ್ಲ, ಆದರೂ ನಡಿಯುತ್ತದೆ. ಏನು ಸಮಸ್ಯೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ದಪ್ಪಗಾಗಿರೋದು, ತೆಳ್ಳಗಾಗಿರೋದು ಪ್ರಶ್ನೆಯಲ್ಲ. ಸಿದ್ದರಾಮಯ್ಯ ಮುದುಕ ಆಗಿದ್ದಾರೆ, ಅದಕ್ಕೆ ಚೆನ್ನಾಗಿ ಕಾಣಿಸಬೇಕು ಎಂದು ಬಣ್ಣ ಬಣ್ಣದ ಬಟ್ಟೆ ಖರೀದಿಸಿದ್ದಾರೆ ಎಂದು ಕಾರಜೋಳ ಪ್ರತಿಕ್ರಿಯಿಸಿದ್ದು, ಇಡೀ ಸದನವನ್ನು ನಗೆ ಅಲೆಯಲ್ಲಿ ತೇಲಿಸಿತು.
ಕಾರಜೋಳ ಬಣ್ಣದ ಬಟ್ಟೆ ಹಾಕುತ್ತಿದ್ದಾರೆ. ಹೀಗಾಗಿ ನಾನು ಅವರನ್ನು ನೋಡಿಯೇ ಚೆನ್ನಾಗಿ ಕಾಣಬೇಕು ಎಂದು ಬಣ್ಣದ ಬಣ್ಣದ ಬಟ್ಟೆ ಖರೀದಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಹಂತದಲ್ಲಿ ಎದ್ದು ನಿಂತ ರಮೇಶ್ ಕುಮಾರ್, ‘ಬಟ್ಟೆ ಹಾಕುವುದು ಮಾನ ಮುಚ್ಚಲು. ಬಟ್ಟೆ ಎಷ್ಟು ಬೇಕಾದರೂ ಖರೀದಿ ಮಾಡಿ ಹಾಕಿಕೊಳ್ಳಲಿ. ಆದರೆ, ಬಟ್ಟೆ ಕಳಚಿಕೊಳ್ಳಬಾರದು' ಎಂದು ಹಾಸ್ಯದ ರೂಪದಲ್ಲಿ ಎಚ್ಚರಿಕೆಯನ್ನು ನೀಡಿದರು.







