ವಿಧಾನ ಪರಿಷತ್: ನರ್ಸಿಂಗ್ ಕುರಿತ ಜಟಾಪಟಿಗೆ 2ನೆ ದಿನದ ಕಲಾಪವೂ ಬಲಿ

ಬೆಂಗಳೂರು, ಮಾ.19: ನರ್ಸಿಂಗ್ ಕಾಲೇಜುಗಳಿಗೆ ಪರವಾನಿಗೆ ನೀಡುವ ವಿಷಯ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ ನಡೆದು ವಿಧಾನ ಪರಿಷತ್ತಿನಲ್ಲಿ ಎರಡನೇ ದಿನದ ಕಲಾಪವೂ ಬಲಿಯಾಯಿತು.
ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಸದನದ ಬಾವಿಗಿಳಿದು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿದ್ದರಿಂದ ಕಲಾಪವನ್ನು 10 ನಿಮಿಷ ಮುಂದೂಡಿಕೆ ಮಾಡಿದ ಸಭಾಪತಿ ಬಸವರಾಜ ಹೊರಟ್ಟಿ ಅವರು ಮೂರೂ ಪಕ್ಷಗಳ ನಾಯಕರ ಜೊತೆ ಸಭೆ ನಡೆಸಿದರು. ಆದರೆ, ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿ, ಸದನ ಸಮಿತಿ ರಚನೆ ಮಾಡುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸದನದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಯಿತು.
ಸಮಿತಿ ರಚನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ನರ್ಸಿಂಗ್ ಕಾಲೇಜುಗಳಿಗೆ ಪರವಾನಿಗೆ ಅನೇಕ ವರ್ಷಗಳಿಂದ ನೀಡಲಾಗಿದೆ. ಅಲ್ಲದೆ, ಸರಕಾರ ಮೂರು ಹಂತಗಳಲ್ಲಿ ಪರಿಶೀಲನೆ ನಡೆಸಿ ಪರವಾನಿಗೆ ನೀಡಿದೆ ಎಂದರು.
ಸೆನೆಟ್ ಸದಸ್ಯರ ಸಮಿತಿ ಶಿಫಾರಸ್ಸು ಹಾಗೂ ಅಕಾಡೆಮಿಕ್ ಕೌನ್ಸಿಲ್ ಸ್ಥಳ ಪರಿಶೀಲಿಸಿ ವರದಿ ನೀಡಿದೆ. ಸಿಂಡಿಕೇಟ್ ಸಮಿತಿ ಅರ್ಜಿಗಳ ಸ್ಥಳ ಮತ್ತು ಪುನರ್ ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಿದ ಮೇಲೆ ಹೈಪವರ್ ಕಮಿಟಿ ಅಂತಿಮವಾಗಿ ಶಿಫಾರಸ್ಸು ಮಾಡಲಿದೆ ಎಂದು ಅವರು ನುಡಿದರು.
ವೈದ್ಯಕೀಯ ಶಿಕ್ಷಣವನ್ನು ಅಂತರ್‍ರಾಷ್ಟ್ರೀಯ ದರ್ಜೆಗೆ ತರಬೇಕು ಎಂದು ಆಮೂಲಾಗ್ರ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನರ್ಸಿಂಗ್ ಸಂಸ್ಥೆಗಳಿಗೆ ಅವಕಾಶ ನೀಡಿದ್ದೇವೆ. ತಾಂತ್ರಿಕ ಲೋಪವಿದ್ದರೆ ಪ್ರತಿಪಕ್ಷಗಳು ತಿಳಿಸಿ ಸರಿಪಡಿಸಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಈ ಕುರಿತು ಸರಕಾರದ ಹಂತದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಸಿದ್ಧವಿದ್ದು, ಮೂರು ವಿಷಯ ತಜ್ಞರನ್ನು ಒಳಗೊಂಡು ಸಮಿತಿ ರಚಿಸಲಾಗುವುದು. ಜತೆಗೆ ಮೂರು ತಿಂಗಳ ಸಮಯ ನೀಡಿ, ಆನಂತರ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸುಧಾಕರ್ ತಿಳಿಸಿದರು.
ಈ ವೇಳೆ, ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಸದನದ ಎಲ್ಲರ ಅಭಿಪ್ರಾಯ ತೆಗೆದುಕೊಂಡು ಸದನ ಸಮಿತಿ ರಚಿಸುವ ವಿಚಾರದಲ್ಲಿ ನಿರ್ಧಾರ ಪ್ರಕಟಿಸಿ ಎಂದು ಮತಕ್ಕೆ ಹಾಕುವಂತೆ ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಯಾವುದೇ ಪ್ರಸ್ತಾವನೆ ಇಲ್ಲದೆ ಮತ ವಿಭಜನೆಗೆ ಹಾಕಲು ಬರುವುದಿಲ್ಲ. ಬಿಲ್, ಪ್ರಸ್ತಾವನೆ ಇದ್ದರೆ ಮಾತ್ರ ಮತಕ್ಕೆ ಹಾಕಲಾಗುತ್ತದೆ ಎಂದು ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಸದನದಲ್ಲಿ ಗದ್ದಲ ಮುಂದುವರಿಸಿದ್ದರಿಂದ ಸಭಾಪತಿ ಕಲಾಪವನ್ನು ಸೋಮವಾರ ಬೆಳಗ್ಗೆ 10 ಗಂಟೆಗೆ ಮುಂದೂಡಿದರು.
‘ರಾಜೀನಾಮೆಗೆ ಸಿದ್ಧ’
ಹೈಪವರ್ ಕಮಿಟಿ 62 ಸಂಸ್ಥೆಗಳಿಗೆ ಪರವಾನಿಗೆಗೆ ಶಿಫಾರಸ್ಸು ಮಾಡಿದ್ದು, ಅದರಲ್ಲಿ 47ಕ್ಕೆ ಪರವಾನಿಗೆ ದೊರೆತಿದೆ. ಅಲ್ಲದೆ, ಐಎನ್‍ಸಿ ನಿಯಮದ ಪ್ರಕಾರ ಶೇ.50ರಷ್ಟು ಕಾಲೇಜುಗಳಿದ್ದರೂ, ನಾನು ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದು ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಸವಾಲು ಹಾಕಿದರು.







