ಕೊಲ್ಲೂರು ದೇವಸ್ಥಾನದ ಅವ್ಯವಹಾರಗಳ ತನಿಖೆಗೆ ಸಚಿವರ ಆದೇಶ: ಮಹಾಸಂಘ
ಉಡುಪಿ, ಮಾ.19: ಕೊಲ್ಲೂರು ದೇವಸ್ಥಾನದ ಅವ್ಯವಹಾರಗಳ ಬಗ್ಗೆ ಕೂಡಲೇ ತನಿಖೆ ನಡೆಸಲು ಸಂಬಂಧಪಟ್ಟ ಸಚಿವರು ಆದೇಶ ನೀಡಿದ್ದು, ಈ ಸಂಬಂಧ ದೇವಸ್ಥಾನದ ನಿರ್ವಹಣೆ, ಸ್ಥಿರಾಸ್ತಿ ಮತ್ತು ಚರಾಸ್ತಿಯ ಪರಿಶೀಲನೆಯ ಸಂದರ್ಭದಲ್ಲಿ ಈ ಬಗ್ಗೆ ಹೋರಾಟ ಮಾಡಿದ ದೇವಸ್ಥಾನದ ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೂ ಅವಕಾಶ ನೀಡಬೇಕು ಎಂದು ಸಂಘದ ಕರ್ನಾಟಕ ವಕ್ತಾರ ಗುರುಪ್ರಸಾದ ಗೌಡ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತನಿಖೆ ಆದೇಶ ನೀಡಿ ದಂತೆ ಮಾ.20ರಂದು ಬೆಳಗ್ಗೆ ತನಿಖಾ ತಂಡವು ಕೊಲ್ಲೂರು ದೇವಳಕ್ಕೆ ಆಗ ಮಿಸಿ ಪರಿಶೀಲನೆ ನಡೆಸಲಿದೆ. ಈ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ ಮಹಾಸಂಘಕ್ಕೂ ಭಾಗಿಯಾಗುವ ಅವಕಾಶ ನೀಡಬೇಕು ಎಂದರು.
ತನಿಖೆ ಪಾರದರ್ಶಕ ವಾಗಿರಬೇಕು ಮತ್ತು ಅವ್ಯವಹಾರ ಮಾಡಿದ ಭ್ರಷ್ಟ ಅಧಿಕಾರಿಗಳು ಒಂದೇ ದಿನದಲ್ಲಿ ಕ್ಲೀನ್‌ಚೀಟ್ ಆಗಿ ಹೊರಬರುವುದನ್ನು ತಡೆಯಲು ತನಿಖೆಯಲ್ಲಿ ಭಕ್ತರ ಸಹಭಾಗವು ಮಹತ್ವದ್ದಾಗಿದೆ. ಹಾಗಾಗಿ ಎಲ್ಲ ಆಯಾಮಗಳಿಂದ ತನಿಖೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಧುಸೂದನ ಅಯಾರ್, ದಿನೇಶ್ ಎಂ.ಪಿ., ಚಂದ್ರ ಮೊಗೇರ, ವಿಜಯ ಕುಮಾರ್, ಶ್ರೀನಿವಾಸ ಉಪಸ್ಥಿತರಿದ್ದರು.





