ಕಳವುಗೈದ ಕಾರು ಮಾರಾಟ ಪ್ರಕರಣ: ನಾಲ್ವರ ಬಂಧನ
ಮಂಗಳೂರು, ಮಾ.19: ಕಾರು ಕಳವು ಮಾಡಿ ಅದರ ಚೇಸಿಸ್ ನಂಬರ್‌ಗಳನ್ನು ಬದಲಾವಣೆ ಮಾಡಿ ಮಾರಾಟಕ್ಕೆ ಕೊಂಡೊಯ್ಯುತ್ತಿದ್ದ ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಸ್ಥಳೀಯ ನಿವಾಸಿಗಳಾದ ಅಬ್ದುಲ್ ಸಮದ್, ಮುಹಮ್ಮದ್ ಬಶೀರ್, ಜುನೈದ್, ಮುಹಮ್ಮದ್ ಅಸ್ಗರ್ ಆಗಲಿ ಬಂಧಿತ ಆರೋಪಿಗಳು.
ಪ್ರಕರಣ ವಿವರ: ಮಾ.18ರಂದು ಸಂಜೆ 5:20ರ ವೇಳೆಗೆ ಕದ್ರಿ ಇನ್‌ಸ್ಪೆಕ್ಟರ್ ಸವಿತ್ರ ತೇಜ ನೇತೃತ್ವದ ಪೊಲೀಸರ ತಂಡ ನಗರದ ನಂತೂರು ಸಂದೇಶ ಕಲಾಕೇಂದ್ರದ ಎದುರುಗಡೆ ವಾಹನ ತಪಾಸಣೆ ಮಾಡುತ್ತಿದ್ದರು. ನೋಂದಣಿ ಸಂಖ್ಯೆಯಿಲ್ಲದ ಬಿಳಿ ಬಣ್ಣದ ಮಾರುತಿ ಸುಝಿಕಿಯ ‘ಬಲೆನೋ’ ವಾಹನ ಪಂಪ್‌ವೆಲ್‌ನಿಂದ ಕೆಪಿಟಿ ಕಡೆಗೆ ಬರುತ್ತಿತ್ತು. ಈ ಸಂದರ್ಭ ಪೊಲೀಸರು ವಾಹನ ನಿಲ್ಲಿಸಲು ಸೂಚನೆ ನೀಡಿ, ವಾಹನದ ದಾಖಲಾತಿ ಹಾಜರುಪಡಿಸುವಂತೆ ಸೂಚನೆ ನೀಡಿದರು.
ಈ ವೇಳೆ ಚಾಲಕನು ತಡವರಿಸುತ್ತಾ, ಯಾವುದೇ ದಾಖಲಾತಿಗಳು ಇಲ್ಲ ಹಾಗೂ ಚಾಲನಾ ಪರವಾನಿಗೆ ಕೂಡ ಇರುವುದಿಲ್ಲ ಎಂದು ಹೇಳಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರಿನ ಮಾಲಕರ ಬಗ್ಗೆ ವಿಚಾರಿಸಿದಾಗ ಸ್ಪಷ್ಟ ಮಾಹಿತಿ ಕೂಡ ನೀಡಿರುವುದಿಲ್ಲ. ಇದರಿಂದ ಸಂಶಯ ಉಂಟಾಗಿ ಕಾರಿನ ಎದುರಿನ ಬಾನೆಟ್ ತೆಗೆದು ಕಾರನ್ನು ಪರಿಶೀಲಿಸಿದಾಗ ಕಾರಿನ ಚೇಸಿಸ್ ನಂಬರ್‌ನ್ನು ತಿದ್ದುಪಡಿ ಮಾಡಿದ್ದು ಕಂಡು ಬಂದಿದೆ. ಈ ಬಗ್ಗೆ ಕಾರಿನ ಚಾಲಕನಲ್ಲಿ ಪ್ರಶ್ನಿಸಿದಾಗ ತಾನು ಮತ್ತು ಸ್ನೇಹಿತರು ಸೇರಿ ಕೇರಳದ ಕಾಟಿಕುಲಂ ಎಂಬಲ್ಲಿಂದ ಕಾರನ್ನು ಪಡೆದು ಮಂಗಳೂರಿಗೆ ತರುತ್ತಿರುವುದಾಗಿ ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಮಾರಾಟಕ್ಕೆ ಯತ್ನ: ಬಲೆನೋ ಕಾರಿನ ಚಾಸಿಸ್ ನಂಬರ್ ಮತ್ತು ಇಂಜಿನ್ ನಂಬರ್‌ಗಳನ್ನು ತಿದ್ದುಪಡಿ ಮಾಡಿ, ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಬೇರೆಯವರಿಗೆ ಮಾರಾಟ ಮಾಡಿ ಮೋಸ ಮಾಡುವ ಉದ್ದೇಶದಿಂದ ಆರೋಪಿಗಳು ಕಾರನ್ನು ಎಲ್ಲಿಂದಲೋ ಕಳವು ಮಾಡಿ ಮಂಗಳೂರಿಗೆ ತಂದಿರುವ ಬಗ್ಗೆ ಬಲವಾದ ಸಂಶಯ ಬಂದಿರುವುದರಿಂದ ಅವರನ್ನು ಬಂಧಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







