ಗಣಪತಿ ಗುಡಿ, ಪಂಜುರ್ಲಿ ದೈವಸ್ಥಾನ ನಿರ್ಮಾಣವಾದ್ರೆ ಸಕ್ಕರೆ ಕಾರ್ಖಾನೆ ಅಭಿವೃದ್ಧಿಯಾಗುತ್ತದೆಯಂತೆ!
► ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗೆ ಆರೂಢ ಪ್ರಶ್ನೆ ಕೇಳಿದ ಆಡಳಿತ ಮಂಡಳಿ ► ಕೇರಳದ ಜ್ಯೋತಿಷ್ಯರನ್ನು ಕರೆಸಿ ಆರೂಢ ಪ್ರಶ್ನೆ ►ಜಿಲ್ಲೆಯ ಜನರಿಂದ ಆಕ್ಷೇಪ

ಬ್ರಹ್ಮಾವರ, ಮಾ.19: ಕಳೆದ ಸುಮಾರು ಎರಡು ದಶಕಗಳಿಂದ ಮುಚ್ಚಿರುವ ಬ್ರಹ್ಮಾವರದ ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆಯ ಅಭಿವೃದ್ಧಿ ಗಾಗಿ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಆಡಳಿತ ಮಂಡಳಿ ಆರೂಢ ಪ್ರಶ್ನೆಗಳನ್ನು ಏರ್ಪಡಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಾಧಾರಣವಾಗಿ, ಕರಾವಳಿ ಭಾಗದಲ್ಲಿ ಹೆಚ್ಚಾಗಿ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಸಂದರ್ಭದಲ್ಲಿ ಮಾತ್ರ ಪ್ರಶ್ನಾ ಚಿಂತನೆಗಳು ನಡೆಯುತ್ತವೆ. 1985ರಲ್ಲಿ ಆರಂಭವಾದ ಬ್ರಹ್ಮಾವರ ಈ ಸಕ್ಕರೆ ಕಾರ್ಖಾನೆ, 10 ವರ್ಷದ ಬಳಿಕ ಕುಂಟುತ್ತಾ, ತೆವಳುತ್ತಾ ಕಬ್ಬು ಅರಿಯುತಿದ್ದು 2003ಕ್ಕೆ ಕೊನೆಯ ಲೋಡು ಕಬ್ಬನ್ನು ಅರೆದು ಬೀಗ ಜಡಿದುಕೊಂಡಿತು. ಕರಾವಳಿ ಭಾಗದಲ್ಲಿ ಸಹಕಾರಿ ತತ್ವದ ವ್ಯವಸ್ಥೆಯೊಂದಿಗೆ ಪ್ರಾರಂಭ ಗೊಂಡ ಈ ಸಕ್ಕರೆ ಕಾರ್ಖಾನೆ ಮುಚ್ಚಿ ಎರಡು ದಶಕವಾಗುತ್ತಾ ಬಂದರೂ, ಅದಕ್ಕೆ ಮರುಜೀವ ನೀಡುವ ಹಲವು ಪ್ರಯತ್ನಗಳು ಆರಂಭದ ಅಬ್ಬರವಾಗಿ ಕಾಣಿಸಿಕೊಂಡು ಮತ್ತೆ ತಟಸ್ಥ ಸ್ಥಿತಿಗೆ ಬಂದು ಅಭಿವೃದ್ಧಿಯ ಲಕ್ಷಣ ಗೋಚರಿಸುತ್ತಿರಲಿಲ್ಲ.
ಇದೀಗ ಆರೂಢ ಪ್ರಶ್ನೆಯಲ್ಲಿ, ಒಳಗೊಂದು ಗಣಪತಿ ಗುಡಿ ನಿರ್ಮಾಣವಾಗಬೇಕು. ಆಗ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಉತ್ತರ ಬಂದಿದೆಯಂತೆ. ಜೀರ್ಣವಾದ ಪಂಜುರ್ಲಿ ದೈವಕ್ಕೆ ಸಾನಿಧ್ಯ ನಿರ್ಮಿಸಿ. ನಾಗ ಸನ್ನಿಧಾನಕ್ಕೆ ಸೇವೆ ನಿರಂತರ ಮಾಡಿ. ಎಪ್ರಿಲ್ 14ರೊಳಗೆ ಪೂಜೆ, ದೇವರ ಸೇವೆ ಎಲ್ಲಾ ನೆರವೇರಬೇಕು. ಇದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಆರೂಢ ಪ್ರಶ್ನೆಯ ಪ್ರಮುಖಾಂಶಗಳು.
ಕೇರಳದ ಜ್ಯೋತಿಷ್ಯ ರತ್ನ ಸ್ವಾಮಿನಾಥನ್ ಪಣಿಕ್ಕರ್ ಮತ್ತು ಉಡುಪಿಯ ಧಾರ್ಮಿಕ ವಿದ್ವಾಂಸ ಸಂತೋಷ್ ಆಚಾರ್ಯರ ನೇತೃತ್ವದಲ್ಲಿ ಅರೂಢ ಪ್ರಶ್ನೆ ಚಿಂತನೆ ನಡೆದಿದೆ.
ಸರಕಾರ ಸೂಕ್ತ ಯೋಜನೆಗಳನ್ನು ರೂಪಿಸಿ ಆ ಮೂಲಕ ಕಾರ್ಖಾನೆಯನ್ನು ಮೇಲೆತ್ತಬೇಕಾಗಿದೆ. ಅದು ಬಿಟ್ಟು ಮೌಢ್ಯಗಳಿಗೆ ಬಲಿಯಾಗಿ ಆರೂಢ ಪ್ರಶ್ನೆಯ ಕಾರ್ಯಕ್ರಮವನ್ನು ಏರ್ಪಡಿಸಿರುವುದು ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಗಿದೆ. ನೂತನ ಆಡಳಿತ ಮಂಡಳಿಯ ವರ್ತನೆ ಇದೀಗ ಚರ್ಚೆಯ ವಿಷಯವಾಗಿದೆ.








