ರಮಝಾನ್ ಉಪವಾಸದ ವೇಳೆ ಕೋವಿಡ್ ಲಸಿಕೆ ಸ್ವೀಕರಿಸಬಹುದೇ?
ವಿದ್ವಾಂಸರು ಹೇಳಿದ್ದೇನು?

ದುಬೈ (ಯುಎಇ), ಮಾ. 19: ರಮಝಾನ್ ಉಪವಾಸದ ವೇಳೆ ಕೋವಿಡ್ ಲಸಿಕೆ ಸ್ವೀಕರಿಸುವುದು ಸುರಕ್ಷಿತ ಹಾಗೂ ಸ್ವೀಕಾರಾರ್ಹ ಎಂದು ದುಬೈಯ ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆ (ಐಎಸಿಎಡಿ) ತಿಳಿಸಿದೆ.
ಸ್ನಾಯುಗಳು ಮತ್ತು ರಕ್ತನಾಳಗಳಿಗೆ ಚುಚ್ಚುವ ಸೂಜಿಗಳು ಉಪವಾಸವನ್ನು ಮುರಿಯುವುದಿಲ್ಲ ಹಾಗೂ ಅನೂರ್ಜಿತಗೊಳಿಸುವುದಿಲ್ಲ; ಆದರೆ ಆ ದ್ರವವು ಪೌಷ್ಟಿಕಯುಕ್ತವಾಗಿರಬಾರದು ಎಂಬುದಾಗಿ ವಿದ್ವಾಂಸರು ಹೇಳುತ್ತಾರೆ ಎಂದು ಇಲಾಖೆಯ ಫತ್ವಾ ವಿಭಾಗದ ಗ್ರಾಂಡ್ ಮುಫ್ತಿ ಡಾ. ಮುಹಮ್ಮದ್ ಇಯಾದ ಅಲ್ ಕುಬೈಸಿ ಹೇಳಿದ್ದಾರೆ ಎಂದು ‘ಖಲೀಜ್ ಟೈಮ್ಸ್’ ಗುರುವಾರ ವರದಿ ಮಾಡಿದೆ.
ಹಾಗಾಗಿ, ಉಪವಾಸದ ವೇಳೆ ಕೊರೋನ ವೈರಸ್ ಲಸಿಕೆಯನ್ನು ಸ್ವೀಕರಿಸುವುದು ಸ್ವೀಕಾರಾರ್ಹ ಹಾಗೂ ಅದು ಮುಸ್ಲಿಮರ ಉಪವಾಸದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಅವರು ನುಡಿದರು.
‘‘ದುಬೈಯ ಇಸ್ಲಾಮಿಕ್ ವ್ಯವಹಾರಗಳು ಮತ್ತು ದತ್ತಿ ಚಟುವಟಿಕೆಗಳ ಇಲಾಖೆಯ ಫತ್ವಾ ವಿಭಾಗವು, ಉಪವಾಸದ ವೇಳೆ ಕೊರೊನ ವೈರಸ್ ಲಸಿಕೆ ಸ್ವೀಕರಿಸುವುದಕ್ಕೆ ಸಂಬಂಧಿಸಿ ಅಧಿಕೃತ ಫತ್ವಾವೊಂದನ್ನು ಹೊರಡಿಸಿದೆ’’ ಎಂದು ಅವರು ತಿಳಿಸಿದರು.
‘‘ಲಸಿಕೆಯನ್ನು ಕೈಯ ಸ್ನಾಯು ಮೂಲಕ ನೀಡಲಾಗುವುದು. ಅಲ್ಲಿಂದ ಅದು ದೇಹಕ್ಕೆ ಹರಡುವುದು. ಅದು ಬಾಯಿಯಿಂದ ಹೊಟ್ಟೆಗೆ ತಲುಪುವುದಿಲ್ಲ. ಅದು ಸ್ನಾಯು ಮತ್ತು ರಕ್ತನಾಳಗಳ ಮೂಲಕ ದೇಹದೊಳಗೆ ಸೇರುವ ಪೌಷ್ಟಿಕತೆರಹಿತ ದ್ರವವಾಗಿದೆ. ಅದನ್ನು ಸ್ವೀಕರಿಸಲು ಉಪವಾಸನಿರತ ವ್ಯಕ್ತಿಗೆ ಅನುಮತಿಯಿದೆ. ಈ ತೀರ್ಮಾನಕ್ಕೆ ವಿದ್ವಾಂಸರಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ’’ ಎಂದು ಫತ್ವಾ ತಿಳಿಸಿದೆ.







