ಬಲವಂತವಾಗಿ ಕೇರಳ ಸಿಎಂ ಹೆಸರು ಉಲ್ಲೇಖ: ಈಡಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿದ ಪೊಲೀಸರು
ಚಿನ್ನ ಕಳ್ಳ ಸಾಗಣೆ ಪ್ರಕರಣ

ತಿರುವನಂತಪುರ: ಅಸಾಮಾನ್ಯ ಕ್ರಮವೊಂದರಲ್ಲಿ ಕೇರಳ ಪೊಲೀಸರು ಶುಕ್ರವಾರ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಬಲವಂತವಾಗಿ ಹೇಳಿಕೆ ಕೊಡಿಸಿದ ಆಪಾದನೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ(ಈಡಿ)ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಮೂರು ವಾರಗಳು ಬಾಕಿ ಇರುವಾಗ ಈ ಹೆಜ್ಜೆಯು ಕೇಂದ್ರ-ರಾಜ್ಯ ಸರಕಾರದ ನಡುವೆ ಈಗ ನಡೆಯುತ್ತಿರುವ ಸಂಘರ್ಷವನ್ನು ಮತ್ತೊಂದು ಹಂತಕ್ಕೆ ತಲುಪಿಸಿದೆ.
ಜನರನ್ನು ಪ್ರಮುಖ ಸಮಸ್ಯೆಯಿಂದ ಬೇರಡೆಗೆ ಸೆಳೆಯುವ ಉದ್ದೇಶ ಇದರಲ್ಲಿದೆ ಎಂದು ವಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
ಈ ಕ್ರಮವು ಚುನಾವಣೆಯಲ್ಲಿ ಮಹತ್ವದ ವಿಚಾರವಾಗಲಿದೆ ಎಂದು ಆಡಳಿತಾರೂಢ ಸಿಪಿಎಂ ಹೇಳಿದೆ.
ಈ ಮೊದಲು ಅಪರಾಧ ವಿಭಾಗವು ಈ ಕುರಿತು ಕಾನೂನು ಅಭಿಪ್ರಾಯವನ್ನು ಕೋರಿತ್ತು. ಮೊದಲ ಮಾಹಿತಿ ವರದಿಯಲ್ಲಿ( ಎಫ್ ಐಆರ್)ಅಪರಾಧ ವಿಭಾಗವು ಈಡಿ ಅಧಿಕಾರಿಗಳ ವಿರುದ್ದ ಸಾಕ್ಷ್ಯಗಳನ್ನು ಹೊಂದಿದೆ. ನಂತರ ಆರೋಪಿಯ ಸೋರಿಕೆಯಾದ ಧ್ವನಿ ತುಣುಕು ಕೂಡ ಇದನ್ನು ದೃಢಪಡಿಸಿದೆ ಎಂದು ಹೇಳಿದೆ.
ಸ್ವಪ್ನಾ ಸುರೇಶ್ ಗೆ ಬೆಂಗಾವಲು ನೀಡಿದ್ದ ಕೆಲವು ಮಹಿಳಾ ಪೊಲೀಸ್ ಅಧಿಕಾರಿಗಳು ಕೂಡ ಹೇಳಿಕೆ ನೀಡಿದ್ದರು. ಸ್ವಪ್ನಾ ಸುರೇಶ್ ಅವರಿಂದ ಸಿಎಂ ಹೆಸರನ್ನು ಅಧಿಕಾರಿಗಳು ಬಲವಂತವಾಗಿ ಉಲ್ಲೇಖಿಸಿದ್ದಕ್ಕೆ ನಾವೇ ಸಾಕ್ಷಿಗಳೆಂದು ಅವರು ಹೇಳಿದ್ದಾರೆ.







