ಅಸ್ಸಾಮ್‌ನಲ್ಲಿ ಸಿಎಎ ಜಾರಿಗೊಳ್ಳಲು ಬಿಡುವುದಿಲ್ಲ: ರಾಹುಲ್ ಗಾಂಧಿ ಘೋಷಣೆ

ಗುವಾಹಟಿ, ಮಾ. 19: ಅಸ್ಸಾಮ್‌ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರಾಜ್ಯದಲ್ಲಿ ಜಾರಿಗೊಳ್ಳದಂತೆ ನೋಡಿಕೊಳ್ಳುವುದು ಎಂದು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ರಾಜ್ಯದ ದಿಬ್ರೂಗಢ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದ ಅವರು, ಯಾವುದೇ ಧರ್ಮವು ದ್ವೇಷವನ್ನು ಕಲಿಸುವುದಿಲ್ಲ ಎಂದು ಹೇಳಿದರು. ‘‘ಬಿಜೆಪಿಯು ಜನರನ್ನು ವಿಭಜಿಸುವುದಕ್ಕಾಗಿ ದ್ವೇಷವನ್ನು ಮಾರಾಟ ಮಾಡುತ್ತಿದೆ’’ ಎಂದು ಅವರು ಆರೋಪಿಸಿದರು.
‘‘ಸಮಾಜವನ್ನು ಒಡೆಯಲು ಬಿಜೆಪಿ ದ್ವೇಷವನ್ನು ಬಳಸುತ್ತಿದೆ. ದ್ವೇಷವನ್ನು ಹರಡಲು ಅವರು ಎಲ್ಲೇ ಹೋದರೂ, ಅಲ್ಲಿ ಪ್ರೀತಿ ಮತ್ತು ಸೌಹಾರ್ದತೆಯನ್ನು ಕಾಂಗ್ರೆಸ್ ಎತ್ತಿಹಿಡಿಯುತ್ತದೆ’’ ಎಂದು ರಾಹುಲ್ ಗಾಂಧಿ ಹೇಳಿದರು.
ಬಿಜೆಪಿಯ ಸೈದ್ಧಾಂತಿಕ ಗುರು ಆರ್‌ಎಸ್‌ಎಸ್ ಬಗ್ಗೆ ಪರೋಕ್ಷವಾಗಿ ಪ್ರಸ್ತಾವಿಸಿದ ಅವರು, ‘‘ನಾಗಪುರದಲ್ಲಿರುವ ಶಕ್ತಿಯೊಂದು ಇಡೀ ದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ’’ ಎಂದು ಹೇಳಿದರು. ಆದರೆ, ಅವರ ಪ್ರಯತ್ನಗಳನ್ನು ಯುವಜನರು ಪ್ರೀತಿ ಮತ್ತು ವಿಶ್ವಾಸದೊಂದಿಗೆ ವಿರೋಧಿಸಬೇಕು. ಯಾಕೆಂದರೆ ಯುವಕರೇ ಭಾರತದ ಭವಿಷ್ಯವಾಗಿದ್ದಾರೆ’’ ಎಂದರು.
‘‘ಕಾಂಗ್ರೆಸ್ ಅಸ್ಸಾಮ್‌ಗೆ ಈ ಖಾತರಿ ನೀಡುತ್ತದೆ: ನಾವು ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ನೀಡುತ್ತೇವೆ. ನಾವು ಪ್ರತಿಯೋರ್ವ ಗೃಹಿಣಿಗೆ ತಿಂಗಳಿಗೆ 2,000 ರೂ. ನೀಡುತ್ತೇವೆ’’ ಎಂದು ಅವರು ಘೋಷಿಸಿದರು.







