ತಂದೆಯ 2ನೇ ಮದುವೆಯನ್ನು ಮಗಳು ಪ್ರಶ್ನಿಸಬಹುದು: ಬಾಂಬೆ ಹೈಕೋರ್ಟ್

ಮುಂಬೈ, ಮಾ. 19: ತಮ್ಮ ಹೆತ್ತವರು ಮರು ಮದುವೆಯಾದರೆ ಅದನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಕ್ಕು ಮಕ್ಕಳಿಗಿದೆ ಎಂದು ಬಾಂಬೆ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.
ತನ್ನ ತಂದೆಯ ಎರಡನೇ ಮದುವೆಯನ್ನು ಪ್ರಶ್ನಿಸಿ 66 ವರ್ಷದ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವೊಂದು ತಳ್ಳಿ ಹಾಕಿತ್ತು. ಕೌಟುಂಬಿಕ ನ್ಯಾಯಾಲಯದ ಈ ಆದೇಶವನ್ನು ರದ್ದುಪಡಿಸಿ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ಗುರುವಾರ ಈ ತೀರ್ಪು ನೀಡಿದೆ.
ಸಯನ್ ನಿವಾಸಿ ಅರ್ಜಿದಾರ ಮಹಿಳೆಯ ತಂದೆ 2015ರಲ್ಲಿ ಮೃತಪಟ್ಟಿದ್ದಾರೆ. ತಂದೆ ತನ್ನ ಮೊದಲ ಹೆಂಡತಿ ತೀರಿದ ಬಳಿಕ 2013ರಲ್ಲಿ ಇನ್ನೊಂದು ಮದುವೆಯಾಗಿದ್ದರು.
ಮಹಿಳೆಯು ತನ್ನ ತಂದೆಯ ಹಳೆಯ ದಾಖಲೆಗಳನ್ನು ಪರಿಶೀಲಿಸಿದಾಗ, ತಂದೆಯ ಎರಡನೇ ಹೆಂಡತಿಯು ತನ್ನ ಮೊದಲ ಗಂಡನಿಂದ ವಿಚ್ಛೇದನೆ ಪಡೆಯುವ ಮೊದಲೇ ತಂದೆಯನ್ನು ಮದುವೆಯಾದ ವಿಚಾರ ಹಾಗೂ ಈಗ ತಂದೆಯ ಎಲ್ಲ ಆಸ್ತಿ ಅವರ ಹೆಸರಿನಲ್ಲಿರುವ ವಿಚಾರ ಅವರ ಗಮನಕ್ಕೆ ಬಂತು.
ಎರಡನೇ ಹೆಂಡತಿಯು ತನ್ನ ತಂದೆಯ ಮಾನಸಿಕ ಕಾಯಿಲೆ, ದೌರ್ಬಲ್ಯಗಳನ್ನು ಬಳಸಿಕೊಂಡು ಅವರನ್ನು ಮದುವೆಯಾಗಿ ಹಂತ ಹಂತವಾಗಿ ಅವರ ಎಲ್ಲ ಆಸ್ತಿಗಳನ್ನು ತನ್ನ ಹೆಸರಿಗೆ ಪರಿವರ್ತನೆ ಮಾಡಿಕೊಂಡಿರುವುದನ್ನೂ ಮಹಿಳೆ ಪತ್ತೆಹಚ್ಚಿದರು.
ಬಳಿಕ ತನ್ನ ತಂದೆಯ ಎರಡನೇ ಮದುವೆಯ ಸಿಂಧುತ್ವವನ್ನು ಪ್ರಶ್ನಿಸಿ ಹಾಗೂ ಅದನ್ನು ಶೂನ್ಯ ಎಂಬುದಾಗಿ ಘೋಷಿಸಬೇಕೆಂದು ಕೋರಿ ಮಹಿಳೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು.
ಮಹಿಳೆಗೂ ಅವರ ತಂದೆಯ ಮದುವೆಗೂ ಯಾವುದೇ ಸಂಬಂಧವಿಲ್ಲ, ಹಾಗಾಗಿ, ಈ ಮದುವೆಯನ್ನು ಪ್ರಶ್ನಿಸುವ ಹಕ್ಕು ಅವರಿಗಿಲ್ಲ ಎಂದು ಬಾಂದ್ರಾ ಕೌಟುಂಬಿಕ ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
‘‘ಮದುವೆಯ ಸಿಂಧುತ್ವವನ್ನು ಗಂಡ ಅಥವಾ ಹೆಂಡತಿ ಮಾತ್ರ ಪ್ರಶ್ನಿಸುವುದಲ್ಲ. ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಫಲಾನುಭವಿಗಳು ಕೂಡ ಪ್ರಶ್ನಿಸಬಹುದು’’ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.







