ಡಿಜಿಟಲ್ ಮಾಧ್ಯಮ ನಿಯಮ ಪ್ರಶ್ನಿಸಿ 'ದಿ ಕ್ವಿಂಟ್' ಅರ್ಜಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ಮಾ.19: ಡಿಜಿಟಲ್ ಮಾಧ್ಯಮ ನಿಯಂತ್ರಣಕ್ಕೆ ಕೇಂದ್ರ ಸರಕಾರ ರೂಪಿಸಿರುವ ಹೊಸ ನಿಯಮಗಳನ್ನು ಪ್ರಶ್ನಿಸಿ ‘ದಿ ಕ್ವಿಂಟ್’ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಸರಕಾರಕ್ಕೆ ದಿಲ್ಲಿ ಹೈಕೋರ್ಟ್ ನೋಟಿಸ್ ನೀಡಿದೆ ಎಂದು ವರದಿಯಾಗಿದೆ. ಜಾರಿಗೊಳಿಸಿರುವ ಮಾರ್ಗಸೂಚಿಗಳ ಆಧಾರದಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲು ಆರಂಭಿಸಿದೆ. ಕೇಂದ್ರ ಸರಕಾರದ ದಬ್ಬಾಳಿಕೆಯ ಕ್ರಮಗಳಿಂದ ರಕ್ಷಣೆ ನೀಡುವಂತೆ ‘ದಿ ಕ್ವಿಂಟ್’ ಮಾಧ್ಯಮ ಸಂಸ್ಥೆಯ ಪ್ರತಿನಿಧಿ ಹಿರಿಯ ನ್ಯಾಯವಾದಿ ನಿತ್ಯಾ ರಾಮಕೃಷ್ಣನ್ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಆನ್‌ಲೈನ್ ಸುದ್ದಿಪೋರ್ಟಲ್‌ಗಳು(ವೆಬ್‌ಸೈಟ್) ಹಾಗೂ ಮುದ್ರಣ ಮಾಧ್ಯಮಗಳೆರಡೂ ಪ್ರಚಲಿತ ವಿದ್ಯಮಾನಗಳ ವರದಿ ಮಾಡುವುದರಿಂದ ಎರಡನ್ನೂ ಸಮಾನವಾಗಿ ಪರಿಗಣಿಸಬೇಕು. ‘ದಿ ಕ್ವಿಂಟ್’ನಂತಹ ಡಿಜಿಟಲ್ ಸುದ್ಧಿಸಂಸ್ಥೆಗಳು ಹಿತಾಸಕ್ತಿಗೆ ಸಂಬಂಧಿಸಿದ ಎಲ್ಲಾ ಸಿವಿಲ್ ಮತ್ತು ಕ್ರಿಮಿನಲ್ ಕಾನೂನುಗಳ ವ್ಯಾಪ್ತಿಗೆ ಬರುತ್ತವೆ. ಆದ್ದರಿಂದ ಹೊಸದಾಗಿ ರೂಪಿಸಲಾದ ಐಟಿ ಕಾಯ್ದೆ 2021 ಸಂವಿಧಾನದ 19(2) ಅನುಚ್ಛೇದಕ್ಕೆ ವ್ಯತಿರಿಕ್ತವಾಗಿದ್ದು ಡಿಜಿಟಲ್ ಸುದ್ದಿ ಪೋರ್ಟಲ್‌ಗಳ ನಿಯಂತ್ರಣವನ್ನು ಕೇಂದ್ರದ ಕೈಗೆ ಒಪ್ಪಿಸುವ ಉದ್ದೇಶ ಹೊಂದಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿಯನ್ನು ಕೈಗೆತ್ತಿಕೊಂಡ ಹೈಕೋರ್ಟ್, ಈ ಹಂತದಲ್ಲಿ ಯಾವುದೇ ಆದೇಶ ನೀಡಲಾಗದು ಎಂದು ಹೇಳಿತಲ್ಲದೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಹಾಗೂ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಎಪ್ರಿಲ್ 16ಕ್ಕೆ ನಿಗದಿಗೊಳಿಸಿದೆ. ದಿ ಫೌಂಡೇಶನ್ ಫಾರ್ ಇಂಡಿಪೆಂಡೆಂಟ್ ಜರ್ನಲಿಸಂ, ‘The News Minute’ ನ ಪ್ರಧಾನ ಸಂಪಾದಕಿ ಧನ್ಯಾ ರಾಜೇಂದ್ರನ್, ‘ದಿ ವೈರ್’ನ ಸ್ಥಾಪಕ ಸಂಪಾದಕ ಎಂಕೆ ವೇಣು ಸಲ್ಲಿಸಿರುವ ಅರ್ಜಿಗಳನ್ನೂ ಇದೇ ದಿನ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ನಿಯಂತ್ರಣದ ಉದ್ದೇಶದಿಂದ ರೂಪಿಸಿರುವ ಹೊಸ ನಿಯಮಗಳನ್ನು ಒಳಗೊಂಡ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮ 2021ರ ಬಗ್ಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.
ಡಿಜಿಟಲ್ ಮಾಧ್ಯಮ, ಸಾಮಾಜಿಕ ಮಾಧ್ಯಮಗಳನ್ನು ಸರಕಾರದ ನಿಗಾ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ನಿಯಮ ಹಾಗೂ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಒಂದು ಸುದ್ಧಿ ಅಥವಾ ಸಂದೇಶದ ಮೂಲವ್ಯಕ್ತಿಯ ಕುರಿತ ಮಾಹಿತಿಯನ್ನು ಸರಕಾರಕ್ಕೆ ಒದಗಿಸುವುದೂ ಸೇರಿದಂತೆ, ಆನ್‌ಲೈನ್ ವೇದಿಕೆಗಳು ತಮ್ಮ ನೆಟ್‌ವರ್ಕ್‌ನ ಪೋಸ್ಟ್‌ಗಳ ಕುರಿತ ದೂರಿಗೆ ಹೆಚ್ಚು ಸ್ಪಂದಿಸಬೇಕಾಗುತ್ತದೆ. ಜೊತೆಗೆ, ವ್ಯಕ್ತಿಗಳ ಖಾಸಗಿತನದ ಮೇಲೆ ಪರಿಣಾಮ ಬೀರಬಹುದಾದ ಪರಿಶೀಲನಾ ವ್ಯವಸ್ಥೆಯನ್ನು ರೂಪಿಸುವಂತೆ ಹೊಸ ನಿಯಮದಡಿ ಸೂಚಿಸಲಾಗಿದೆ.







