"ನನ್ನ ತಂದೆ ಮೋದಿ ಮತ್ತು ಅಮಿತ್ ಶಾ ರನ್ನು ಭೇಟಿಯಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ"
ಮುಂಬೈಯಲ್ಲಿ ಆತ್ಮಹತ್ಯೆಗೈದ ಸಂಸದ ಡೆಲ್ಕರ್ ಪುತ್ರ ಆರೋಪ

photo: ANI
ಮುಂಬೈ: ಮುಂಬೈಯ ಹೋಟೆಲ್ ಒಂದರಲ್ಲಿ ಫೆಬ್ರವರಿ 22ರಂದು ಆತ್ಮಹತ್ಯೆಗೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ದಾದ್ರಾ ಮತ್ತು ನಗರ್ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರು ದಿಲ್ಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ವಿವರಿಸಿದ್ದರೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರಕಿರಲಿಲ್ಲ ಎಂದು ದೇಲ್ಕರ್ ಅವರ ಪುತ್ರ ಅಭಿನವ್ ಡೆಲ್ಕರ್ ಅವರು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.
"ಕಳೆದ ಕೆಲ ತಿಂಗಳುಗಳಿಂದ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ತಾವು ಎದುರಿಸುತ್ತಿದ್ದ 40-50 ಸಮಸ್ಯೆಗಳ ಕುರಿತಂತೆ ಹಲವು ಬಾರಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರೂ ಯಾರೂ ಅವುಗಳಿಗೆ ಗಮನ ನೀಡಿಲ್ಲ" ಎಂದು ಅಭಿನವ್ ಹೇಳಿಕೊಂಡಿದ್ದಾರೆ.
"ಕೇಂದ್ರದ ಜತೆ ತಂದೆ ಮಾಡಿದ್ದ ಎಲ್ಲಾ ಪತ್ರವ್ಯವಹಾರಗಳನ್ನು ನೋಡಿದ್ದೇನೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಸ್ಪೀಕರ್ ಓಂ ಬಿರ್ಲಾ ಅವರಿಗೆ 40-50 ವಿಷಯಗಳಿಗೆ ಸಂಬಂಧಿಸಿ ಅವರು ಹಲವಾರು ಪತ್ರ ಬರೆದಿದ್ದರು. ಅವರು ಸಮಯ ಹೊಂದಿಸಿಕೊಂಡು ಪ್ರಧಾನಿ ಮೋದಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ದಿಲ್ಲಿಗೂ ಹೋಗಿದ್ದರು, ಆದರೆ ಅವರು ಯಾವುದೇ ಭರವಸೆ ನೀಡಿರಲಿಲ್ಲ," ಎಂದು ಅಭಿನವ್ ಹೇಳಿದ್ದಾರೆ.
ಅಭಿನವ್ ಪ್ರಕಾರ ಅವರ ತಂದೆ ಮುಂಬೈನ ಮೆರೀನ್ ಡ್ರೈವ್ ಪ್ರದೇಶದ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೈದ ಎರಡು ದಿನಗಳಿಗೆ ಮುಂಚೆ, ಫೆಬ್ರವರಿ 20ರಂದು ಅವರು ದಾದ್ರಾ ಮತ್ತು ನಗರ್ ಹವೇಲಿಯ ಸಿದ್ದಿವಿನಾಯಕ ದೇವಸ್ಥಾನಕ್ಕೆ ಹೋಗಿದ್ದರು. ಮರುದಿನ ಸಂಜೆ ಅವರು ತಮ್ಮ ಮನೆಯಿಂದ ಮುಂಬೈಗೆ ಹೊರಟಿದ್ದರು ಹಾಗೂ ತಮಗೆ ಅಲ್ಲಿ ಕೆಲಸವಿದೆ ಎಂದು ಹೇಳಿದ್ದರು, ಆದರೆ ಅವರ ಮೊಗದಲ್ಲಿ ಯಾವುದೇ ಆತಂಕದ ಚಿಹ್ನೆಯಿರಲಿಲ್ಲ, ಎರಡು ದಿನಗಳ ತರುವಾಯ ಅವರು ಗುಜರಾತಿ ಭಾಷೆಯಲ್ಲಿ 14 ಪುಟಗಳ ಸುಸೈಡ್ ನೋಟ್ ಬರೆದು ಆತ್ಮಹತ್ಯೆಗೈದಿದ್ದಾರೆಂಬ ಸುದ್ದಿ ಕುಟುಂಬಕ್ಕೆ ತಿಳಿದು ಬಂತು" ಎಂದು ಹೇಳಿದ ಅಭಿನವ್, ದೂರವಾಣಿ ಕರೆ ಅಥವಾ ಸಂದೇಶದ ಮೂಲಕ ಬಂದಿರಬಹುದಾದ `ಬೆದರಿಕೆ' ತಮ್ಮ ತಂದೆ ತಮ್ಮ ಜೀವನ ಅಂತ್ಯಗೊಳಿಸುವಂತೆ ಮಾಡಿರಬಹುದು ಎಂದು ಸಂಶಯ ವ್ಯಕ್ತಪಡಿಸುತ್ತಾರೆ.
ತಮ್ಮ ತಂದೆ ದಾದ್ರಾ ಮತ್ತು ನಗರ್ ಹವೇಲಿಯ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರಿಂದ ನಿರಂತರ ಕಿರುಕುಳಕ್ಕೊಳಗಾಗಿದ್ದರು, ಸರಕಾರಿ ಅಧಿಕಾರಿಗಳಿಂದ ಸಾರ್ವಜನಿಕವಾಗಿ ಅವಮಾನಕ್ಕಿಡಾಗಿದ್ದರು ಹಾಗೂ ಸುಳ್ಳು ಪ್ರಕರಣದಲ್ಲಿ ಸಿಕ್ಕಿಸಿ ಹಾಕುವ ಬೆದರಿಕೆಗಳನ್ನು ಎದುರಿಸಿದ್ದರು ಎಂದು ಅಭಿನವ್ ಆರೋಪಿಸುತ್ತಾರೆ. "ಈ ಸಮಸ್ಯೆ 2019ರಲ್ಲಿ ಆರಂಭಗೊಂಡಿತ್ತು. ಪ್ರಫುಲ್ ಪಟೇಲ್ ಮತ್ತು ಇತರ ಅಧಿಕಾರಿಗಳು ತಂದೆಗೆ ಯಾವುದೇ ಆಯ್ಕೆ ಉಳಿಯುವಂತೆ ಮಾಡಿಲ್ಲ" ಎಂದು ಅಭಿನವ್ ಹೇಳಿದ್ದಾರೆ.
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ ಅಲ್ಲಿನ ಗೃಹ ಸಚಿವರಾಗಿ ಪ್ರಫುಲ್ ಪಟೇಲ್ ಸೇವೆ ಸಲ್ಲಿಸಿದ್ದರು. ಅವರನ್ನು ಎನ್ಡಿಎ ಸರಕಾರ 2016ರಲ್ಲಿ ದಾದ್ರಾ ಮತ್ತು ನಗರ್ ಹವೇಲಿಯ ಆಡಳಿತಾಧಿಕಾರಿಯನ್ನಾಗಿ ನೇಮಕಗೊಳಿಸಿತ್ತು.
ಅಭಿನವ್ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು ಅದರಲ್ಲಿ ಪ್ರಫುಲ್ ಪಟೇಲ್ ಹೊರತಾಗಿ ಡಿಎಂ ಸಂದೀಪ್ ಸಿಂಗ್, ಮಾಜಿ ಎಸ್ಪಿ ಶರದ್ ದರದೆ, ದಾದ್ರಾ ನಗರ್ ಹವೇಲಿ ಕಾನೂನು ಕಾರ್ಯದರ್ಶಿ ರೋಹಿತ್ ಯಾದವ್, ಮತ್ತಿತರರ ಹೆಸರುಗಳಿವೆ.
ಪಟೇಲ್ ಅವರು ಡೆಲ್ಕರ್ ಅವರಿಗೆ ರೂ 25 ಕೋಟಿ ಪಾವತಿಸುವಂತೆ ಬಲವಂತ ಪಡಿಸಿದ್ದರು, ಇಲ್ಲದೇ ಹೋದಲ್ಲಿ ಸಮಾಜ ವಿರೋಧಿ ಚಟುವಟಿಕೆ ನಿಯಂತ್ರಣ ಕಾಯಿದೆಯಡಿ ಸುಳ್ಳು ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು, ಎಂದು ದೂರಿನಲ್ಲಿ ಆರೋಪಿಸಲಾಗಿದೆ.







