ಉಡುಪಿ ನಗರಸಭೆಯಿಂದ 4.67ಕೋಟಿ ರೂ. ಮಿಗತೆ ಬಜೆಟ್ ಮಂಡನೆ

ಉಡುಪಿ, ಮಾ.20: ಉಡುಪಿ ನಗರಸಭೆಯ 2021-22ನೆ ಸಾಲಿನ 4,67,34,000ರೂ. ಮಿಗತೆಯ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಇಂದು ಮಂಡಿಸಿದರು.
ಈ ಬಾರಿಯ ಮುಂಗಡ ಪತ್ರದಲ್ಲಿ ಒಟ್ಟು 146.91ಕೋಟಿ ರೂ. ಆದಾಯ (ಆರಂಭದ ಶಿಲ್ಕು 83.57ಕೋಟಿ ರೂ. ಮತ್ತು ಒಟ್ಟು ಸ್ವೀಕೃತಿಗಳು 63.33 ಕೋಟಿ ರೂ.) ಹಾಗೂ 142.24ಕೋಟಿ ರೂ. ಒಟ್ಟು ವೆಚ್ಚಗಳನ್ನು ತೋರಿಸಲಾಗಿದೆ.
ಆದಾಯಗಳ ಅಂದಾಜು
15ನೆ ಕೇಂದ್ರ ಹಣಕಾಸು ಆಯೋಗದ ಅನುದಾನ ಒಟ್ಟು 5.24 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಮುಕ್ತನಿಧಿ ಅನುದಾನ 2.08ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ಸಿಬ್ಬಂಧಿ ವೇತನ ಅನುದಾನ 5.41 ಕೋಟಿ ರೂ., ರಾಜ್ಯ ಹಣಕಾಸು ಆಯೋಗದ ವಿದ್ಯುತ್ ಬಿಲ್ ಅನುದಾನ 6.74ಕೋಟಿ ರೂ., ಎಸ್‌ಎಫ್‌ಸಿ ವಿಶೇಷ ಅನುದಾನ 5ಕೋಟಿ, ಸ್ವಚ್ಛ ಭಾರತ್ ಮಿಷನ್ ಅನುದಾನ 4.13ಕೋಟಿ ರೂ., ಗೃಹ ಭಾಗ್ಯ ಯೋಜನೆ 20ಲಕ್ಷ ರೂ. ಆದಾಯ ಅಂದಾಜಿಸಲಾಗಿದೆ.
ಸಂಸತ್/ವಿಧಾನಸಭಾ ಸದಸ್ಯರ ಅನುದಾನ10ಲಕ್ಷ ಹಾಗೂ ಅದಿಭಾರ ಶುಲ್ಕ 25 ಲಕ್ಷವನ್ನು ಮತ್ತು ನಗರಸಭಾ ಆಸ್ತಿ ತೆರಿಗೆಯಿಂದ ಸರಾಸರಿ1350 ಲಕ್ಷ ರೂ., ಪರವಾನಿಗೆ ಶುಲ್ಕ 65 ಲಕ್ಷ ಮತ್ತು ಜಾಹೀರಾತು ಶುಲ್ಕ 20 ಲಕ್ಷ ರೂ., ಕಟ್ಟಡ ಕಾಯ್ದೆಗಳಿಗೆ ಸಂಬಂಧಪಟ್ಟ ಪದವಾನಿಗೆ ಶುಲ್ಕ 35ಲಕ್ಷ ರೂ., ನೀರು ಸರಬರಾಜು ಶುಲ್ಕದಿಂದ 9ಕೋಟಿ ರೂ., ವಾಣಿಜ್ಯ ಸಂಕೀರ್ಣಗಳಿಂದ 1.75ಕೋಟಿ ರೂ. ಆದಾಯ ವನ್ನು ನಿರೀಕ್ಷಿಸಲಾಗಿದೆ.
ವೆಚ್ಚಗಳ ಅಂದಾಜು
ಕಚೇರಿಯ ಆಡಳಿತಾತ್ಮಕ ವೆಚ್ಚಗಳಿಗೆ 2.08ಕೋಟಿ, ಲೋಕೋಪಯೋಗಿ ಕಾಮಗಾರಿಗಳಿಗೆ ನಗರಸಭಾ ನಿಧಿಯಿಂದ 28.67ಕೋಟಿ, ದಾರಿ ದೀಪಗಳ ದುರಸ್ತಿ ಹಾಗೂ ನಿರ್ವಹಣೆಗೆ 1.37ಕೋಟಿ, ನೀರು ಸರಬರಾಜಿಗೆ ಸಂಬಂಧಿಸಿ 10.31ಕೋಟಿ ರೂ., ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಗೆ 24.68 ಕೋಟಿ ರೂ., ಒಳಚರಂಡಿ ಮತ್ತು ಎಸ್‌ಟಿವಿಗಳ ನಿರ್ವಹಣೆಗೆ 3.18ಕೋಟಿ ರೂ. ನಿಗದಿಪಡಿಸಲಾಗಿದೆ.
ಒಳಚರಂಡಿ ಜಾಲ ಅಭಿವೃದ್ಧಿಗೆ ಮತ್ತು ಕೊಳಚೆ ನೀರು ಶುದ್ದೀಕರಣ ಘಟಕದ ವೆಚ್ಚಗಳಿಗೆ 3.97ಕೋಟಿ ರೂ., ಉದ್ಯಾನವನಗಳಿಗೆ 1.50ಕೋಟಿ ರೂ., ಸ್ಮಶಾನಗಳ ಅಭಿವೃದ್ಧಿಗಾಗಿ 1.33ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿ ನಿಧಿ 32.4ಲಕ್ಷ ರೂ., ವಿಕಲ ಚೇತನರ ಕಲ್ಯಾಣ ನಿಧಿ 22.35ಲಕ್ಷ ರೂ. ಲಕ್ಷ ರೂ.ವನ್ನು ಕಾದಿರಿಸಲಾಗಿದೆ.
ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು
ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಂಬೇಡ್ಕರ್ ಪ್ರತಿಮೆಯ ಬಳಿ ಉದ್ಯಾನವನ ಅಭಿವೃದ್ಧಿಗಾಗಿ 50ಲಕ್ಷ ರೂ. ಮೀಸಲಿರಿಸಲಾಗಿದೆ. ನಿಟ್ಟೂರು ಎಸ್‌ಟಿಪಿ, ಕರ್ವಾಲು ಘನತ್ಯಾಜ್ಯ ನಿರ್ವಹಣಾ ಘಟಕ, ಬಜೆ ನೀರು ಸರಬ ರಾಜು ಸ್ಥಾವರ ಪ್ರದೇಶಗಳಲ್ಲಿ ಮತ್ತು ಸರಕಾರಿ ಸ್ಥಳಗಳಲ್ಲಿ ಗಿಡಗಳನ್ನು ನೆಡಲು ಯೋಜನೆ ಹಾಕಿಕೊಳ್ಳಲಾಗಿದೆ.
ಇಂದ್ರಾಳಿ ಸ್ಮಶಾನ ಅಭಿವೃದ್ಧಿ ಮತ್ತು ಬೀಡಿನಗುಡ್ಡೆ ಸ್ಮಶಾನ ಅಭಿವೃದ್ಧಿಗೆ ಒಟ್ಟು 1.23ಕೋಟಿ ರೂ. ಮೀಸಲಿರಿಸಲಾಗಿದೆ. ನಿಟ್ಟೂರು ಎಸ್‌ಟಿಪಿ ಘಟಕದಲ್ಲಿ ಶುದ್ಧೀಕರಿಸಿದ ನೀರಿನ ಪುನರ್‌ಬಳಕೆ ಯೋಜನೆಗೆ ಯಂತ್ರೋಪಕರಣಗಳ ಖರೀದಿಗೆ 53ಲಕ್ಷ ರೂ. ಕಾದಿರಿಸಲಾಗಿದೆ. ಮಳೆನೀರು ಹರಿಯುವ ತೋಡು ಗಳು, ತಡೆಗೋಡೆ, ಸಣ್ಣ ಸೇತುವೆಗಳ ನಿರ್ಮಾಣ ಹಾಗೂ ದುರಸ್ತಿಗಾಗಿ 2 ಕೋಟಿ ರೂ. ಮೀಸಲಿರಿಸಲಾಗಿದೆ.
ನಗರದ ವಿಶ್ವೇಶರಯ್ಯ ಮಾರುಕಟ್ಟೆಯನ್ನು ಸಾರ್ವಜನಿಕ ಸಹಭಾಗಿತ್ವ ದೊಂದಿಗೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದೆ. ಪರ್ಕಳದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ 3.50ಕೋಟಿ ರೂ., ಸಂತೆಕಟ್ಟೆಯಲ್ಲಿ 5ಕೋಟಿ ರೂ. ಮತ್ತು ಮಣಿಪಾಲದಲ್ಲಿ 2.50ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದೆ. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಡಾ.ಉದಯ ಶೆಟ್ಟಿ ಉಪಸ್ಥಿತರಿದ್ದರು.
ನಗರಸಭೆಗೆ ಹೊಸ ಕಟ್ಟಡ ನಿರ್ಮಾಣ
ನಗರಸಭೆ ಕಚೇರಿಗೆ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಹಳೆ ತಾಲೂಕು ಕಚೇರಿ ಕಟ್ಟಡದ 0.96 ಎಕರೆ ಜಾಗವನ್ನು ಮೀಸಲಿರಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸ ಲಾಗಿದೆ. ಪೌರ ಕಾರ್ಮಿಕರಿಗೆ ಬೀಡಿನಗುಡ್ಡೆಯಲ್ಲಿ 2ಕೋಟಿ ರೂ. ವೆಚ್ಚದಲ್ಲಿ ವಸತಿ ಸಮುಚ್ಛಯ, ಮಣಿಪಾಲದಲ್ಲಿ 2ಕೋಟಿ ರೂ. ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಪ್ಲಾಸ್ಟಿಕ್ ಬಳಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮವನ್ನು ಮುಂದುವರೆಸಲಾಗುವುದು ಎಂದು ಅವರು ತಮ್ಮ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿದರು.
130ಕೋಟಿ ವೆಚ್ಚದಲ್ಲಿ ಯುಯುಡಿಪಿಐ ಯೋಜನೆ
ಮಲ್ಪೆ, ಉಡುಪಿ, ಮಣಿಪಾಲ ಪ್ರದೇಶವನ್ನು ಸಾರ್ವಜನಿಕ ಸಹಭಾಗಿತ್ವದ ಡಿಬಿಎಂಎಫ್ ಮಾದರಿಯಲ್ಲಿ 130ಕೋಟಿ ರೂ. ವೆಚ್ಚದಲ್ಲಿ ಉಡುಪಿ ಅರ್ಬನ್ ಡಿಜಿಟಲ್ ಇನ್ಫ್ರಸ್ಟಕ್ಚರ್ ಪ್ರೊಜೆಕ್ಟ್‌ನ್ನು ಅನುಷ್ಠಾನಗೊಳಿಸಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ವೃತ್ತಗಳು ಮತ್ತು ತಂಗುದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಿಟಿ ಬಸ್ ನಿಲ್ದಾಣವನ್ನು ಉನ್ನತೀಕರಿಸಿ ಡಲ್ಟ್ ಯೋಜನೆಯಲ್ಲಿ ಬಸ್ ನಿಲ್ದಾಣ ಮತ್ತು ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಗಾಗಿ ಯೋಜಿಸಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗುವ ಬ್ಯಾನರ್ ಗಳ ತೆರವು ಮತ್ತು ಪ್ಲಾಸ್ಟಿಕ್ ಬ್ಯಾನರ್‌ಗಳನ್ನು ಕೈಬಿಟ್ಟು ಬಟ್ಟೆ ಬ್ಯಾನರ್ ಬಳಸಲು ಕ್ರಮ ವಹಿಸಲಾಗುವುದು ಎಂದು ಅಧ್ಯಕ್ಷರು ಪ್ರಕಟಿಸಿದರು.
ಮಹಿಳೆಯಾಗಿ ಉತ್ತಮ ಬಜೆಟ್ ಮಂಡನೆ ಮಾಡಿದ್ದೀರಿ. ಆದರೆ ಮಹಿಳೆ ಯಾಗಿ ಮಹಿಳೆಯರಿಗೆ ಯಾವುದೇ ಯೋಜನೆಯನ್ನು ಈ ಬಜೆಟ್‌ನಲ್ಲಿ ಮಂಡಿಸಿಲ್ಲ. ಕೊರೋನದಿಂದ ಎಲ್ಲ ಕುಟುಂಬಗಳು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಮಹಿಳೆಯರಿಗೆ ಸ್ವಉದ್ಯೋಗ ನಡೆಸಲು ಅನುಕೂಲವಾಗುವ ಯೋಜನೆಯನ್ನು ಬಜೆಟ್‌ನಲ್ಲಿ ಸೇರಿಸಬೇಕು. -ಅಮೃತಾ ಕೃಷ್ಣಮೂರ್ತಿ, ವಿಪಕ್ಷ ಸದಸ್ಯರು
ನಗರಸಭೆಗೆ ಆದಾಯ ಬರುವಂತೆ ಯೋಜನೆಗಳನ್ನು ಈ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಅದೇ ರೀತಿ ಪೌರಕಾರ್ಮಿಕರನ್ನು ಗಮನದಲ್ಲಿಟ್ಟು ಕೊಂಡು ಅವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿರುವುದು ಬಹಳ ಉತ್ತಮವಾದ ಹೆಜ್ಜೆ ಯಾಗಿದೆ. ಇದೊಂದು ಅತ್ಯುತ್ತಮವಾದ ಬಜೆಟ್ ಆಗಿದೆ. -ಗಿರೀಶ್ ಕಾಂಚನ್, ಅಧ್ಯಕ್ಷ ಸ್ಥಾಯಿ ಸಮಿತಿ, ನಗರಸಭೆ







