ಪೋಷಣ್ ಪಕ್ವಾಡ ಅಭಿಯಾನ್ ಯೋಜನೆಯ ಅರಿವು

ಉಡುಪಿ, ಮಾ.20:ಅಪೌಷ್ಠಿಕತೆಯು ಮಕ್ಕಳು, ಗರ್ಭಿಣಿ, ಬಾಣಂತಿ, ಕಿಶೋರಾ ವಸ್ಥೆಯಲ್ಲಿ ಕಂಡು ಬರುತ್ತಿದ್ದು, ಈ ಅಪೌಷ್ಠಿಕತೆಯನ್ನು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರ ಹಲವು ಯೋಜನೆಗಳನ್ನು ತಂದಿದ್ದು, ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಠಿಕ ಆಹಾರವನ್ನು ನೀಡುತ್ತಿವೆ ಎಂದು ಉಡುಪಿ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್ ತಿಳಿಸಿದ್ದಾರೆ.
ಹಿರಿಯಡ್ಕ ಕೆ.ಪಿ.ಎಸ್.ಪ್ರೌಢಶಾಲಾ ವಿಭಾಗದ ಚಂದಯ್ಯ ಹೆಗ್ಡೆ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಯುಷ್ ಇಲಾಖೆ, ತಾಪಂ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಉಡುಪಿ ಹಾಗೂ ಕೆ.ಪಿ.ಎಸ್. ಪ್ರೌಢಶಾಲಾ ವಿಭಾಗ ಹಿರಿಯಡ್ಕ ಇವರ ಸಹಯೋಗದೊಂದಿಗೆ ನಡೆದ ಪೋಷಣ್ ಪಕ್ವಾಡ ಅಭಿಯಾನ್ ಯೋಜನೆಯ ಯೋಗಾಸನ ವಾರ್ಗದರ್ಶನ ಶಿಬಿರ ಹಾಗೂ ಅಪೌಷ್ಠಿಕತೆ ಹೋಗಲಾಡಿಸುವಿಕೆ ಆಯುಷ್-ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಿಶೋರಿಯರು ಭವಿಷ್ಯದ ಉತ್ತಮ ಸಧೃಢ ತಾಯಂದಿರಾಗಲು ಹಾಗೂ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರದ ಸೇವನೆಯೊಂದಿಗೆ ಉತ್ತಮ ಆರೋಗ್ಯಕರ ಅಭ್ಯಾಸಗಳಾದ ವ್ಯಾಯಾಮ, ಯೋಗ, ಧ್ಯಾನ ಬಹಳ ಅಗತ್ಯ ಎಂದು ತಿಳಿಸಿದರು.
ಆಯುಷ್ ಇಲಾಖೆಯ ಅಧಿಕಾರಿ ಡಾ.ಅಲಕಾನಂದ ರಾವ್ ಮಾತನಾಡಿ, ಆಯುಷ್ ಅರಿವು ಹಾಗೂ ಯೋಗಾಸನ ಕಾರ್ಯಕ್ರಮ ಮುಖ್ಯವಾಗಿ ಹದಿಹರೆಯದವರಿಗಾಗಿ ಆಯೋಜಿಸಿದ್ದು, ಹಸಿವಾದಾಗ ಜಂಕ್ ಆಹಾರವನ್ನು ಸೇವಿಸುವ ಬದಲು ಸ್ಥಳೀಯ ಲ್ಯ ಪೋಷಕಾಂಶಯುಕ್ತ ಆಹಾರ, ಋತುಮಾನಕ್ಕೆ ತಕ್ಕಂತ ಆಹಾರವನ್ನು ಸೇವಿಸುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್ ಮಾತನಾಡಿ, ಯೋಗಾಸನ ಮಾರ್ಗದರ್ಶನ ಶಿಬಿರ ಹಾಗೂ ಅಪೌಷ್ಠಿಕತೆ ಹೋಗಲಾಡಿಸುವಿಕೆ ಆಯುಷ್-ಅರಿವು ಕಾರ್ಯಕ್ರಮವು ಒಂದು ಉತ್ತಮ ಕಾರ್ಯಕ್ರಮವಾಗಿದ್ದು, ಅದರ ಸದುಪಯೋಗವನ್ನು ಎಲ್ಲಾ ಕಿಶೋರಿಯರು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಪ್ರಕಾಶ್ ನಾಯಕ್ ಹಾಗೂ ಡಾ.ಶಿಲ್ಪ, ಕೆ.ಪಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶಾರದಾ, ಪದವಿ ಪೂರ್ವ ಕಾಲೇಜಿನ ಪ್ರಬಾಲ್ ನಳಿನಾ ದೇವಿ ಎಂ.ಆರ್ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಶಾಂತಿ ಪ್ರಭು ನಿರೂಪಿಸಿ, ಮೇಲ್ವಿಚಾರಕಿ ಪೂರ್ಣಿಮಾ ವಂದಿಸಿದರು.







